ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪೊಲೀಸ್ ತನಿಖೆಗೆ ಅನುಮತಿ ನೀಡಿರುವ ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಕೋರಿ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ವಿವಾದಿತ ಭೂಮಿ ಮಾರಾಟ ಮಾಡಿದ್ದ ಜೆ.ದೇವರಾಜು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಬುಧವಾರ ದೇವರಾಜು ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ದುಷ್ಯಂತ್ ದವೆ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹಾಜರಾಗಿ, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ.23ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.
ಏಕ ಸದಸ್ಯ ನ್ಯಾಯಪೀಠ ಮುಡಾ ಪ್ರಕರಣದ ತನಿಖೆಗೆ ಅನುಮತಿಸುವ ಮೂಲಕ ತಾವು ವಿನಾಕಾರಣ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯನ್ನೂ ಸಹ ವಿಭಾಗೀಯ ಪೀಠ ನ.23ರಂದೇ ವಿಚಾರಣೆ ನಡೆಸಲಿದೆ.
ಮೇಲ್ಮನವಿದಾರ (ದೇವರಾಜು) ಪರ ವಕೀಲರು ವಾದ ಮಂಡಿಸಿ, ಮೇಲ್ಮನವಿದಾರರು ಸಣ್ಣ ಭೂ ಮಾಲೀಕರಾಗಿದ್ದಾರೆ. ಶಕ್ತಿಯುತ ರಾಜಕಾರಣಿಗಳ ರಾಜಕೀಯ ಕೆಸರೆರಚಾಟದಲ್ಲಿ ಅವರನ್ನು ಸಿಲುಕಿಸಲಾಗಿದೆ. 25 ವರ್ಷಗಳ ಹಿಂದೆ ನಡೆದಿರುವ ಪ್ರಕರಣದಲ್ಲಿ ದೇವರಾಜು ವಿರುದ್ಧ ಏಕ ಸದಸ್ಯ ಪೀಠವು ಕಟು ಅಭಿಪ್ರಾಯ ವ್ಯಕ್ತಪಡಿಸಿ, ಪೊಲೀಸ್ ತನಿಖೆಗೆ ಅನುಮತಿಸಿದೆ. ಇದರಿಂದ ಮೇಲ್ಮನವಿದಾರರು ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸಬೇಕಿದೆ. ದೇವರಾಜು ಸಾಮಾನ್ಯ ಮನುಷ್ಯನಾಗಿದ್ದು, ಸಕಾರಣವಿಲ್ಲದೇ ಯಾತನೆ ಅನುಭವಿಸುತ್ತಿದ್ದಾರೆ. ನಮ್ಮ ಮೇಲ್ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ:ದೇವನೂರು ಬಡಾವಣೆ ಅಭಿವೃದ್ಧಿಗಾಗಿ ಮೈಸೂರು ಜಿಲ್ಲೆಯ ಕೆಸರೆ ಗ್ರಾಮದ ಸರ್ವೇ ನಂ.464ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ 3.16 ಎಕರೆ ಜಾಗವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಶಪಡಿಸಿಕೊಂಡಿತ್ತು. ಅದರ ಬದಲಿಗೆ ಮುಡಾ 14 ನಿವೇಶನಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಅಕ್ರಮ ನಡೆದಿದೆ ಎಂದು ತಿಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸ್ ತನಿಖೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು.
ರಾಜ್ಯಪಾಲರು ಆದೇಶ ರದ್ದು ಕೋರಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಸೆ.24ರಂದು ಮುಖ್ಯಮಂತ್ರಿಗಳ ಅರ್ಜಿ ವಜಾಗೊಳಿಸಿ, ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಸಲು ಅನುಮತಿ ನೀಡಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶ ಮಾಡಿತ್ತು. ನಂತರ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ನಡೆಸುತ್ತಿದ್ದಾರೆ. ಇದರಿಂದ ವಿವಾದಿತ ಜಮೀನನ್ನು ಸಿಎಂ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದ ಜೆ.ದೇವರಾಜು ತನಿಖೆ ಎದುರಿಸುವಂತಾಗಿದ್ದು, ಇದೀಗ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮುಡಾಗೆ ಸಿಎಂ ಪತ್ನಿ ಪಾರ್ವತಿ ಪತ್ರ: 14 ಬದಲಿ ನಿವೇಶನ ಹಿಂದಿರುಗಿಸಲು ನಿರ್ಧಾರ; ಪತ್ರದ ಡೀಟೇಲ್ಸ್ ಇಂತಿದೆ! - Siddaramaiah Wife Letter To MUDA