ಬೆಂಗಳೂರು:2024ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ. ಎನ್ಡಿಎ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದು, ಅಧಿಕಾರ ಹಿಡಿಯುವ ಸನ್ನಾಹದಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಬೆಳೆ ಬೆಳೆದಿದ್ದು, ಕಾಂಗ್ರೆಸ್ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ.
ಟಿಕೆಟ್ ಹಂಚಿಕೆ ವೇಳೆಯೂ ರಾಜಕೀಯ ಪಕ್ಷಗಳಲ್ಲಿ ಭಾರೀ ಕಸರತ್ತು ನಡೆಸಲಾಗಿತ್ತು. ವಿಶೇಷವೆಂದರೆ, ರಾಜ್ಯದ 28 ಕ್ಷೇತ್ರಗಳಲ್ಲಿ ಹಲವರಿಗೆ ಮೊದಲ ಅವಕಾಶ ನೀಡಲಾಗಿದೆ. ಮಂಗಳವಾರ ಫಲಿತಾಂಶ ಹೊರಬಿದ್ದಿದ್ದು, 20 ಮಂದಿ ಇದೇ ಮೊದಲ ಬಾರಿಗೆ ಸಂಸತ್ಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿಂದ ಗೆದ್ದಿರುವ ಎಲ್ಲ 9 ಅಭ್ಯರ್ಥಿಗಳು ಹೊಸಬರು ಅನ್ನೋದು ವಿಶೇಷವಾಗಿದೆ.
ಕಾಂಗ್ರೆಸ್ನ ಚೊಚ್ಚಲ ಎಂಪಿಗಳು ಇವರೇ:ಕಾಂಗ್ರೆಸ್ನಿಂದ 9 ಮಂದಿ ಮೊದಲ ಬಾರಿಗೆ ಸಂಸದರಾಗಿದ್ದಾರೆ. ಅವರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ 26 ವರ್ಷದ ಸಾಗರ್ ಖಂಡ್ರೆ, ರಾಯಚೂರು ಲೋಕಸಭಾ ಕ್ಷೇತ್ರದಿಂದ ಜಯ ಸಾಧಿಸಿರುವ ಕುಮಾರ್ ನಾಯಕ್, ಬಳ್ಳಾರಿಯಲ್ಲಿ ಗೆದ್ದಿರುವ ಇ.ತುಕಾರಾಂ, ಚಿಕ್ಕೋಡಿಯಲ್ಲಿ ವಿಜಯ ಸಾಧಿಸಿರುವ 27 ವರ್ಷದ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆಯಲ್ಲಿ ಗೆದ್ದ ಪ್ರಭಾ ಮಲ್ಲಿಕಾರ್ಜುನ್, ಕಲಬುರಗಿಯಲ್ಲಿ ವಿಜಯ ಪತಾಕೆ ಹಾರಿಸಿದ ರಾಧಾಕೃಷ್ಣ ದೊಡ್ಡಮನಿ, ಕೊಪ್ಪಳದಲ್ಲಿ ಗೆದ್ದ ರಾಜಶೇಖರ್ ಹಿಟ್ನಾಳ್, ಚಾಮರಾಜನಗರದಲ್ಲಿ ಕಾಂಗ್ರೆಸ್ಗೆ ಜಯ ತಂದ ಸುನೀಲ್ ಬೋಸ್, ಹಾಸನದ ಜಯ ಗಳಿಸಿದ ಶ್ರೇಯಸ್ ಪಟೇಲ್ ಚೊಚ್ಚಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಬಿಜೆಪಿ, ಜೆಡಿಎಸ್ ನೂತನ ಸಂಸದರು:ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ನ ಪ್ರಬಲ ಸಂಸದ ಡಿ.ಕೆ.ಸುರೇಶ್ ವಿರುದ್ಧ ಗೆದ್ದ ಡಾ.ಸಿ.ಎನ್.ಮಂಜುನಾಥ್, ತುಮಕೂರಿನಲ್ಲಿ ಜಯಿಸಿದ ವಿ.ಸೋಮಣ್ಣ, ಪ್ರತಾಪ್ ಸಿಂಹ ಬದಲಿಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ ರಾಜವಂಶಸ್ಥ ಯದುವೀರ್ ಒಡೆಯರ್, ಉಡುಪಿ-ಚಿಕ್ಕಮಗಳೂರಿನಲ್ಲಿ ಕಮಾಲ್ ಮಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕೋಟೆ ಕೆಡವಿದ ಗೋವಿಂದ ಕಾರಜೋಳ, ಬೆಳಗಾವಿಯಲ್ಲಿ ಮತ್ತೆ ರಾಜಕೀಯ ಮರುಜನ್ಮ ಪಡೆದ ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಲ್ಲಿ ಗೆದ್ದ ಡಾ.ಕೆ.ಸುಧಾಕರ್, ಹಾವೇರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ಗೆ ಸೋಲುಣಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಗೆದ್ದ ಮಾಜಿ ಯೋಧ ಕ್ಯಾ.ಬ್ರಿಜೇಶ್ ಚೌಟ ಮತ್ತು ಜೆಡಿಎಸ್ನಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ ಮಲ್ಲೇಶ್ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
ಅತಿ ಹಿರಿಯ-ಕಿರಿಯ ಸಂಸದರು:ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಗೆದ್ದ ಕಾಂಗ್ರೆಸ್ನ ಸಾಗರ್ ಖಂಡ್ರೆ (26 ವರ್ಷ) ರಾಜ್ಯದ ಅತೀ ಕಿರಿಯ ಸಂಸದ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್. ಚಂದ್ರಪ್ಪ ವಿರುದ್ಧ ಗೆಲುವು ಸಾಧಿಸಿದ ಗೋವಿಂದ ಕಾರಜೋಳ(73) ಅವರು ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ:ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಟಾಪ್ 5 ಅಭ್ಯರ್ಥಿಗಳು - Lok Sabha Election Results