ಸಂಸದ ರಮೇಶ ಜಿಗಜಿಣಗಿ ಹೇಳಿಕೆ ವಿಜಯಪುರ:ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು. ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾದ ವಿಜಯಪುರ ರೈಲ್ವೇ ನಿಲ್ದಾಣದ ಉದ್ಘಾಟನೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನನಗೆ ಈಗಾಗಲೇ ಪಕ್ಷದಿಂದ ಸೂಚನೆಗಳು ಬಂದಿವೆ. ನಾನೇ ಈ ಕ್ಷೇತ್ರದ ಅಭ್ಯರ್ಥಿ. ಈ ಭಾಗದ ಜನ ವೋಟ್ ಹಾಕ್ತಾರೆ ಎಂಬ ವಿಶ್ವಾಸವಿದೆ. ಅಂದಾಜು 1 ಲಕ್ಷ ಕೋಟಿ ರೂ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.
ರಮೇಶ ಜಿಗಜಿಣಗಿ ಆಸ್ತಿ ಮೌಲ್ಯ 2004ರಲ್ಲಿ 54.80 ಲಕ್ಷ ರೂ ಇದ್ದದ್ದು 2019ರಲ್ಲಿ 50.41 ಕೋಟಿ ರೂ.ಗೆ ಏರಿಕೆಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದಡ್ಡರು ತಪ್ಪು ಬರೆದಿದ್ದಾರೆ. ಇನ್ನೂ ಹೆಚ್ಚಿದೆ ನನ್ನ ಆಸ್ತಿ. ದಡ್ಡರು ನೀವು. ಮಾಧ್ಯಮದವರು ಬಹಳ ಕಡಿಮೆ ಬರೆದಿದ್ದೀರಿ ಎಂದು ವ್ಯಂಗ್ಯವಾಡಿದರು.
ನಾನೇನು ಎಲ್ಲಿಯಾದರೂ ರೋಡ್ ಕೆದರಿ ರೊಕ್ಕ ಮಾಡಿದ್ನಾ?, ಎಲ್ಲಿಯಾದರೂ ಲಂಚ ಕೇಳಿದ್ನಾ?, ನನ್ನ ಹಾಗೂ ಮಕ್ಕಳ ಸ್ವಂತ ದುಡಿಮೆಯಿಂದ ಗಳಿಸಿದ್ದು ಅದು. ಯಾರಪ್ಪನದ್ದೂ ಇದರಲ್ಲಿ ಹಂಚಿಕೆ ಇಲ್ಲ ಎಂದು ಖಾರವಾಗಿ ನುಡಿದರು.
ನಾನು ಗಾಂಧಿ ಚೌಕ್ನಲ್ಲಿ ಅಜ್ಜ ಹೇಗೆ ಅಂಗಿ ಕಳೆದು ಕುಳಿತಿದ್ದಾನೋ ಹಾಗಿದ್ದೀನಿ. ಬೇಕಾದವರು ಬರಲಿ. ನನ್ನ 150 ಎಕರೆ ಜಮೀನು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಂದಿದೆ. ಈಗ ನೀವು ಕಡಿಮೆ ಬರೆದಿದ್ದೀರಿ. ಈ ಬಾರಿ ಹೆಚ್ಚಿಗೆ ಬರೆಯಿರಿ. ವ್ಯಾಲ್ಯುವೇಶನ್ ಎಷ್ಟಾಗುತ್ತೆ ನೋಡೋಣ ಎಂದರು.
ಇನ್ನು, ತಮ್ಮ ಆರೋಗ್ಯದ ಕುರಿತ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ತಮ್ಮ ಹಿಂದೆ ಜಾತಿ ಬಲವಿದೆ ಎಂಬ ಮಾತುಗಳಿಗೆ, ನಾನೆಂದೂ ನನ್ನ ಜೀವನದಲ್ಲಿ ಹೀಗೆ ಹೇಳಿದ್ದೇನಾ?, ಎಲ್ಲಾ ವರ್ಗ, ಸಮಾಜದ ಜನರನ್ನು ಕಟ್ಟಿಕೊಂಡು ಹದಿನೆಂಟು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ದಲಿತ ಸಮಾಜವನ್ನೇ ದೂರ ಇಟ್ಟಿದ್ದೀನಿ. ಆದರೆ ಅವರಿಗೆ ಏನು ಬೇಕೋ ಅದನ್ನು ಕೊಟ್ಟಿದ್ದೀನಿ, ಮಾಡಿದ್ದೀನಿ. ಆದರೆ ನನ್ನ ಜೀವನದಲ್ಲಿ ಎಂದೂ ಸಹ ಜಾತಿ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ವಿಜಯಪುರ ಸಂಸದ ರಮೇಶ ಜಿಗಜಿಣಗಿಗೆ ಲಘು ಹೃದಯಾಘಾತ, ಆಸ್ಪತ್ರೆಗೆ ದಾಖಲು