ರಾಮನಗರ: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಬಿಜೆಪಿಯವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ರಾಮನಗರ ಜಿಲ್ಲೆ ಹಾರೋಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರು ನಿಮ್ಮ ಹೇಳಿಕೆಯನ್ನು ದೇಶ ವಿಭಜನೆ ಕೂಗು ಎಂದು ಹೇಳಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿ, ಏನೇ ಹೇಳಿದರೂ ನಡೆಯುತ್ತದೆ ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ನೀವು ನನ್ನನ್ನು ಪ್ರಶ್ನೆ ಮಾಡಿದ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದೆ ಎಂದು ನೀವು ಪ್ರಧಾನಿಯವರನ್ನು ಕೇಳಿ ಎಂದರು.
ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚೆ ಮಾಡಿ. ನೀರಿನ ಅಭಾವ ಇರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ನೀಡುತ್ತಿಲ್ಲ?. ಈ ಯೋಜನೆಗೆ ಅನುಮತಿ ನೀಡಲು ಯಾವ ಸಮಸ್ಯೆ ಇದೆ. ನಾನು ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ಅವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ. ಒಬ್ಬ ಭಾರತೀಯನಾಗಿ ಹಾಗೂ ಕನ್ನಡಿಗನಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ. ಅವರು ಏನೇ ಅಂದರೂ ಚಿಂತೆಯಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಶಾಡೋ ಸಿಎಂಗಳನ್ನೂ ಜನ ನೋಡಿದ್ದಾರೆ: ಅನೇಕ ಸೂಪರ್ ಸಿಎಂಗಳಿದ್ದಾರೆ ಎಂಬ ಪ್ರಧಾನಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಹೇಳುವುದು ಹೊಸತೇನಲ್ಲ. ಅವರ ಸರ್ಕಾರ ಇದ್ದಾಗ ಯಾರೆಲ್ಲಾ ಶಾಡೋ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಜನ ನೋಡಿದ್ದಾರೆ. ಅವರು ಹೇಳಿಕೆ ಕೇವಲ ಚುನಾವಣಾ ಗಿಮಿಕ್ ಎಂದರು.