ಹಾವೇರಿ:ಮಹದಾಯಿ ಯೋಜನೆಗೆ ಯಾರಾದರೂ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. 2009ರಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದ್ದರು ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟ್ರಿಬ್ಯುನಲ್ ಮಾಡಿ ಅಧ್ಯಕ್ಷರಿಗೆ ಒಂದು ಆಫೀಸ್ ಕೂಡಾ ಕೊಡಲಿಲ್ಲ, ಅದಕ್ಕೆ ನಾಲ್ಕೈದು ವರ್ಷ ವಿಳಂಬ ಮಾಡಿದ್ದರು. ಟ್ರಿಬ್ಯುನಲ್ನಲ್ಲಿ ತಾವೇ ಬರೆದುಕೊಟ್ಟು, ನಾವು ನಿರ್ಮಿಸಿದ ಇಂಟಲ್ ಲಿಂಕಿಂಗ್ ಕೆನಾಲ್ಗೆ ಗೋಡೆ ಕಟ್ಟಿದರು. ಅದೆಲ್ಲಾ ಇತಿಹಾಸದಲ್ಲಿದೆ. ಈಗ ವೈಲ್ಡ್ ಲೈಫ್ ಬೋರ್ಡ್ ಅನುಮತಿ ತೆಗೆದುಕೊಳ್ಳಬೇಕು. ಅದಕ್ಕೆ ಸೂಕ್ತ ದಾಖಲಾತಿ ನೀಡಿದರೆ ಮಹದಾಯಿ ಯೋಜನೆಗೆ ಒಪ್ಪಿಗೆ ಸಿಗುತ್ತದೆ ಎಂದು ಹೇಳಿದರು.
11 ವಿಧೇಯಕಗಳನ್ನು ವಾಪಸ್ ಕಳಿಸಿದ್ದಕ್ಕೆ ರಾಜ್ಯಪಾಲರ ವಿರುದ್ದ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟದ ಚಿಂತನೆ ವಿಚಾರದ ಕುರಿತು ಮಾತನಾಡಿದ ಅವರು, ಕಾನೂನು ಹೋರಾಟ ಮಾಡಲು ಅವಕಾಶವಿದೆ, ಮಾಡಲಿ ಎಂದರು.