ಶಿರಸಿ:ನಮ್ಮ ಅಂತಿಮ ಗೆಲುವು ಹಿಂದೂ ರಾಷ್ಟ್ರ. ಅದರ ನಿರ್ಮಾಣಕ್ಕೆ ಪ್ರತಿಯೊಬ್ಬ ಸನ್ನದ್ದರಾಗಬೇಕಿದೆ. ರಾಜ್ಯದಲ್ಲಿ ದುರಹಂಕಾರಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಅದರಿಂದ ನಮಗೆ ಅನ್ಯಾಯವಾಗಿದೆ. ಮುಂಬರುವ ದಿನಗಳಲ್ಲಿ ಅದನ್ನು ನಿಲ್ಲಿಸ್ತೇನಿ. ಅವರ ಕುಣಿದಾಟವನ್ನು ಸರಿ ಮಾಡ್ತಿನಿ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಶನಿವಾರ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ದೇಶಕ್ಕೆ ಬಿಜೆಪಿ ಬೇಕು. ಒಮ್ಮೆ ಗೆದ್ದರೇ ಸಾಕಾಗೋದಿಲ್ಲ ಅಂತಿಮ ತನಕ ನಾವೇ ಗೆಲ್ಲುತ್ತಿರಬೇಕು. ಏನದು ಅಂತಿಮ ಗೆಲವು ಎಂದರೇ ನಮ್ಮ ಗೆಲವು ಹಿಂದೂರಾಷ್ಟ್ರ ನಮ್ಮ ಗುರಿ ಹಿಂದೂರಾಷ್ಟ್ರ ಎಂದ ಅವರು ಮುಂದೆ ಎಲ್ಲವೂ ಸರಿಹೋಗುತ್ತದೆ. ಜಾತಿ ಧರ್ಮ ಅದು ಇದು, ವ್ಯವಸ್ಥೆ ಸಹ ಸರಿ ಹೋಗುತ್ತೆ. ಅಲ್ಲದೇ ದೇಶಕ್ಕೆ ಒಬ್ಬ ಉತ್ತಮವಾದ ನಾಯಕತ್ವದ ಅವಶ್ಯಕತೆ ಇದೆ. ಅದನ್ನು ಸಾಕಾರಗೊಳಿಸಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ದೇಶ ದ್ರೋಹಿ ವಿರೋದ ಪಕ್ಷ ಆಗಿರಬಾರದು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಿದ್ಧತೆ ನಡೆಸಲಾಗುವುದು. ಆ ಮೂಲಕ ವೈರಿಗಳನ್ನ ನೆಲ ಕಚ್ಚಿಸಬೇಕಾಗಿದೆ. ಸಮಾಜದಲ್ಲಿ ದೇಶ ದ್ರೋಹಿ ವಿರೋದ ಪಕ್ಷ ಆಗಿರಬಾರದು. ಲಾಲ್ ಬಹೂದ್ದೂರ್ ಶಾಸ್ತ್ರಿ ಹತ್ಯೆಯಾದ ಹದಿನೈದು ದಿನಗಳಲ್ಲಿ ಬಾಬಾ ಹೋನಿ ಜಹಂಗೀರ್ ಹಾಗೂ ಸಾರಾ ಬಾಯಿ ಹತ್ಯೆಯಾಗಿದೆ. ಆ ಮೂಲಕ ದೇಶವನ್ನು ಮುಗಿಸಲು ಸರಣಿ ಪ್ರಕ್ರಿಯೆ ನಡೆದಿತ್ತು. ದೇಶವನ್ನು ಮುಗಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಆದರೆ 2014ರ ನಂತರ ರಾಷ್ಟ್ರೀಯ ಸರ್ಕಾರ ಬಂದಿತು. ಆಗ ಅವರು ರೂಪಿಸಿದ ಷಡ್ಯಂತ್ರಕ್ಕೆ ತೊಂದರೆ ಆಯಿತು. ರಾಷ್ಟ್ರೀಯ ಭದ್ರತೆ ಹಾಗೂ ಸಮಾಜದ ಹಿತದೃಷ್ಠಿಯಿಂದ ನಾವೆಲ್ಲ ಮತ್ತೊಮ್ಮೆ ಸಂಘಟಿತರಾಗಬೇಕು. ಆ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂದರು.
ಐನೂರು ವರ್ಷದ ಯುದ್ಧದ ಫಲ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದ್ದು, ಐನೂರು ವರ್ಷದ ಯುದ್ಧದ ಫಲವಾಗಿದೆ. ಅಂತಿಮವಾಗಿ ಹಿಂದೂಗಳಿಗೆ ಸಿಕ್ಕ ಗೆಲುವು. ಅದು ಹಿಂದೂಗಳ ಶ್ರದ್ಧಾ ಕೇಂದ್ರ. ಎಲ್ಲ ಕಡೆಯಲ್ಲಿ ರಾಮನಿದ್ದಾನೆ. ಆದರೆ, ದೇಶದಲ್ಲಿ ಅನೇಕ ಅಪಮಾನಕ್ಕೊಳಗಾದ ಹಿಂದೂ ಧಾರ್ಮಿಕ ಕೇಂದ್ರಗಳಿವೆ. ಆ ಬಗ್ಗೆ ಗಮನ ನೀಡಬೇಕಿದೆ. ಆ ಮೂಲಕ ದೇಶದ ಧರ್ಮದ ಕಲ್ಪನೆಗಳು ಸಾಕಾರವಾಗಬೇಕಿದೆ ಎಂದರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ವಿಶ್ವ ಹಿಂದೂ ಪರಿಷತ್ ಗೋಶಾಲೆಯಲ್ಲಿ ಹಣತೆ ತಯಾರಿಕೆ