ನಾಗ್ಪುರ (ಮಹಾರಾಷ್ಟ್ರ) : ಶಿಕ್ಷಣ ಕ್ಷೇತ್ರ ಈಗ ಬಲು ದುಬಾರಿ. ಗುಣಮಟ್ಟದ ಹೆಸರಿನಲ್ಲಿ ಖಾಸಗಿ ಶಾಲೆಗಳು ಲಕ್ಷಗಟ್ಟಲೆ ಹಣವನ್ನು ಕಟ್ಟಿಸಿಕೊಳ್ಳುತ್ತವೆ. ಹೀಗಾಗಿ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಕಾನ್ವೆಂಟ್ಗಳಿಗೆ ಸೇರಿಸುವುದು ಕಷ್ಟ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಿಪ್ಪ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇವಲ 1 ರೂಪಾಯಿಗೆ ಮಕ್ಕಳನ್ನು ಇಂಗ್ಲಿಷ್ ಸ್ಕೂಲ್ಗೆ ದಾಖಲಿಸಿಕೊಳ್ಳುವ ಖಾಸಗಿ ಶಾಲೆ ಇದೆ.
ನಂಬಲಸಾಧ್ಯವಾದರೂ ಇದು ನಿಜ. ಇಲ್ಲಿ ಸೇರುವ ಮಕ್ಕಳಿಂದ ಕೇವಲ 1 ರೂಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತದೆ. ಜೊತೆಗೆ, ಪುಸ್ತಕ, ನೋಟ್ಬುಕ್, ಶೂ, ಸಮವಸ್ತ್ರ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತದೆ. ಇದೊಂದು ರೀತಿ ಬಡಮಕ್ಕಳ ಆಶಾಕಿರಣವಾಗಿದೆ.
ಟಿನ್ ಶೆಡ್ನಲ್ಲಿ ಕಾನ್ವೆಂಟ್ ಶಾಲೆ : ನಾಗ್ಪುರದ ರಹೋಟ್ ನಗರ ಟೋಲಿ ಕೊಳಗೇರಿಯಲ್ಲಿ ಖುಶಾಲ್ ಧಾಕ್ ರಹತೇ ಎಂಬವರು ಟಿನ್ ಶೆಡ್ನಡಿ ಈ ಶಾಲೆಯನ್ನು ತೆರೆದಿದ್ದಾರೆ. ಇಲ್ಲಿನ ಬಡ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವುದನ್ನು ಕಂಡು ಅವರು ಮರುಗಿದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅವರು 3 ಸಾವಿರ ರೂಪಾಯಿಗೆ ಶೆಡ್ವೊಂದನ್ನು ಬಾಡಿಗೆಗೆ ಪಡೆದು ಅದರಲ್ಲೇ ಶಾಲೆ ಶುರು ಮಾಡಿದ್ದಾರೆ.
ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ
ಇದರಲ್ಲಿ ಕೊಳಗೇರಿಯ ಬಡ ಮತ್ತು ದಲಿತರ ಮಕ್ಕಳಿಗೆ 1 ರೂಪಾಯಿ ಶುಲ್ಕದಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಶಾಲೆಗೆ ಸೇರಿದ ನಂತರ ಮಕ್ಕಳಿಗೆ ಉಚಿತ ನೋಟ್ ಬುಕ್, ಪುಸ್ತಕ, ಸಮವಸ್ತ್ರ, ಶೂ ನೀಡಲಾಗುತ್ತಿದೆ. ಉದ್ಯೋಗಸ್ಥರಾಗಿರುವ ಖುಶಾಲ್ ಅವರು ತಮ್ಮ ಸಂಬಳದ 70 ಪ್ರತಿಶತವನ್ನು ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗಾಗಿತೇ ವ್ಯಯ ಮಾಡುತ್ತಿದ್ದಾರೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅವರು ಕಳೆದ 19 ವರ್ಷಗಳಿಂದ ಈ ಕೊಳಗೇರಿಯಲ್ಲಿ ಸಾಕ್ಷರತೆ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.
ಎಲ್ಲವೂ ಬಡ ಮಕ್ಕಳಿಗಾಗಿ : 1 ರೂಪಾಯಿ ಕಾನ್ವೆಂಟ್ ಶಾಲೆ ಆರಂಭಿಸಿರುವ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ಖುಶಾಲ್ ಧಾಕ್ ಅವರು, ಹಣ ಗಳಿಸಲು ಈ ಕಾನ್ವೆಂಟ್ ಆರಂಭಿಸಿಲ್ಲ. ಇಲ್ಲಿನ ಕೊಳಗೇರಿಯ ಮಕ್ಕಳಿಗೆ ಶಿಕ್ಷಣ ನೀಡುವುದು ಗುರುತರ ಉದ್ದೇಶ. ಆರಂಭದಲ್ಲಿ ಇಲ್ಲಿಗೆ ಬಂದು ಬೋಧಿಸಲು ಶಿಕ್ಷಕರು ಹಿಂದೇಟು ಹಾಕಿದರು. ಕ್ರಮೇಣ ಇದು ಬದಲಾಗಿ, ಎಲ್ಲೆಡೆಯಿಂದಲೂ ಶಿಕ್ಷಕರು ಬರಲು ಆರಂಭಿಸಿದರು ಎಂದು ಹೇಳಿದ್ದಾರೆ.
ಒಳ್ಳೆಯ ಮನಸ್ಸಿನಿಂದ ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿವೆ. ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಮರಾಠಿ ಜೊತೆಗೆ ಇಂಗ್ಲಿಷ್ನಲ್ಲೂ ಮಾತನಾಡಲು ಮತ್ತು ಓದಲು ಕಲಿತಿದ್ದಾರೆ. ಇದು ಖುಷಿಯ ಸಂಗತಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 20 ಸರ್ಕಾರಿ ಶಾಲೆಗಳು ಬಂದ್