ಶಿರಸಿ:"ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದಲ್ಲಿ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೆನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರಿಯಲು ಸಾಧ್ಯವೇ?" ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಹೆಗಡೆ ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಹೇಳಿದ ಏಕವಚನ ವಿಷಯ ಪ್ರಸ್ತಾಪಿಸಿದರು. "ಯುದ್ಧ ಕಾಲದಲ್ಲಿ ಯಾವ ಭಾಷೆಯಲ್ಲಿ ಮಾತನಾಡಬೇಕೋ ಅದನ್ನೇ ಬಳಸಬೇಕು. ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ" ಎಂದರು.
"ಮಸೀದಿಯ ಬಗ್ಗೆ ಹೇಳಿದ್ದ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದೇನೆ. ತುಂಬಾ ವರ್ಷದಿಂದ ಯಾವುದೇ ಕೇಸ್ ಇರಲಿಲ್ಲ. ಒಂದು ರೀತಿಯ ಮುಜುಗುರ ಉಂಟಾಗಿತ್ತು. ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಪುನಃ ವಾಪಾಸ್ ಬಂದ ಅನುಭವ ಆಗುತ್ತಿದೆ" ಎಂದರು
ಸಂಘಟನೆ ಕುರಿತು ಮಾತನಾಡಿ, "ಬಿಜೆಪಿ ಮತ್ತು ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ. ನಾವು ಇಲ್ಲದೇ ಹೋದಲ್ಲಿ ಜಗತ್ತಿನಲ್ಲಿ ನೆಮ್ಮದಿ ಇಲ್ಲ. ಹಿಂದೂ ಧರ್ಮ, ಭಾರತ ದೇಶ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿದೆ. ಬಿಜೆಪಿ ಅಧಿಕಾರಲ್ಲಿ ಇದ್ದಲ್ಲಿ ಮಾತ್ರ ದೇಶ ಉಳಿಯಲಿದೆ" ಎಂದರು.
"ಭಾರತೀಯ ಜನತಾ ಪಕ್ಷ, ಸಂಘ ಪರಿವಾರ ಇದ್ದರೆ ಮಾತ್ರ ದೇಶ ಉಳಿಯುತ್ತದೆ. ಹಿಂದುತ್ವವು ನಮ್ಮ ದೇಶದ ಉಸಿರಾಗಿದೆ. ಎಲ್ಲಿಯವರೆಗೆ ಇಸ್ಲಾಂ ಇರುತ್ತದೋ, ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿಯಿಲ್ಲವಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದಂತೆ" ಎಂದರು.
"ಕೇವಲ ಮೂಲ ಸೌಕರ್ಯವೇ ಅಭಿವೃದ್ಧಿಯೆಂದುಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ. ಮುಂಬರುವ ಲೋಕಸಭಾ ಮಹಾ ಸಂಘರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಕಾಂಗ್ರೆಸ್ ಪಕ್ಷದವರು ಈಗಾಗಲೇ ಶಸ್ತ್ರಗಳನ್ನು ತ್ಯಜಿಸಿದ್ದಾರೆ. ವೈಚಾರಿಕವಾಗಿ ನಾವು ಚುನಾವಣೆ ಗೆದ್ದು ತೋರಿಸಬೇಕಾಗಿದೆ. ರಾಜಕೀಯ ಅಂದಮೇಲೆ ವಲಸೆ ಪ್ರಕ್ರಿಯೆ ಸಹಜವಾಗಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ರಾಜಕೀಯ ಡೊಂಬರಾಟ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೆಲ್ಲವನ್ನು ಬದಿಗಿಟ್ಟು ಸಂಘಟನೆಯ ಕಡೆಗೆ ಗಮನಹರಿಸೋಣ" ಎಂದರು.
ಇದನ್ನೂ ಓದಿ:ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತ್ ಕುಮಾರ್ ಹೆಗಡೆ