ಹಾವೇರಿ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಬರುವ 2,000 ರೂ. ಹಣದಿಂದ ಬಹಳಷ್ಟು ಮಹಿಳೆಯರು ಅನುಕೂಲ ಪಡೆಯುತ್ತಿದ್ದಾರೆ. ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಫ್ರಿಡ್ಜ್, ವಾಷಿಂಗ್ ಮಷಿನ್ ಖರೀದಿಸಿದ್ದ ವಿಷಯ ಸುದ್ದಿಯಾಗಿತ್ತು. ಇತ್ತೀಚಿಗೆ ವೃದ್ಧೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದ ಸುದ್ದಿ ವರದಿಯಾಗಿತ್ತು.
ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಅತ್ತೆಯೊಬ್ಬರು ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ. ಹೌದು, ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಅಂದರೆ 20 ಸಾವಿರ ರೂಪಾಯಿಗಳನ್ನು ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಅವರಿಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಮಂಗಳವಾರ ಫ್ಯಾನ್ಸಿ ಸ್ಟೋರ್ಅನ್ನು ಉದ್ಘಾಟನೆ ಮಾಡಲಾಗಿದ್ದು, ಅತ್ತೆ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸಿದ್ದರಾಮಯ್ಯ ಅವರಿಂದ ಪುಣ್ಯದ ಕೆಲಸ: ಅಂಗಡಿ ಉದ್ಘಾಟನೆ ಬಳಿಕ ಮಾತನಾಡಿದ ದಾಕ್ಷಾಯಿಣಿ, ಸಿಎಂ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟಿದ್ದೇನೆ. ಸೊಸೆ ಮಕ್ಕಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದ ಮಕ್ಕಳು ತಾಯಿಗಾಗಿ ಅಳುತ್ತಿದ್ದವು. ಇದನ್ನು ನೋಡಲಾಗದೆ ಸೊಸೆಗೆ ಕೂಲಿ ಕೆಲಸಕ್ಕೆ ಹೋಗುವುದು ಬೇಡ ಎಂದು ಅಂಗಡಿ ಇಟ್ಟುಕೊಟ್ಟಿದ್ದೇವೆ. ನಾವು ತಾಯಿ-ಮಗಳಂತೆ ಇದ್ದೇವೆ. ನಮ್ಮನ್ನು ಬಿಟ್ಟು ಸೊಸೆ ಒಂದು ಕಪ್ ಚಹಾ ಕುಡಿಯುವುದಿಲ್ಲ, ನಾವು ಸೊಸೆಯನ್ನು ಬಿಟ್ಟು ಒಂದು ಕಪ್ ಚಹಾ ಕುಡಿದಿಲ್ಲ. ಸಿದ್ದರಾಮಯ್ಯ ಅವರಿಂದ ಪುಣ್ಯದ ಕೆಲಸ ಆಗಿದೆ ಎಂದು ಹೇಳಿದರು.