ಹಾವೇರಿ:ನಿಲ್ಲಿಸಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕುಸುಮಾ (56) ಮತ್ತು ಕುಮಾರ (34) ಎಂದು ಗುರುತಿಸಲಾಗಿದೆ. ಮೃತರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿಗಳು. ಹಂಸಭಾವಿಯ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹಂಸಭಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಘಟನೆ - ಮಹಿಳೆ ಸಾವು:ಮತ್ತೊಂದು ಘಟನೆಯಲ್ಲಿ,ಬೈಕ್ ಸವಾರನ ನಿರ್ಲಕ್ಷ್ಯಕ್ಕೆ ಆತನ ಪತ್ನಿಯೇ ಬಲಿಯಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ನಲ್ಲಿ ನಡೆದಿತ್ತು. ಟೋಲ್ ಗೇಟ್ ಹಾಕಿದ್ದರೂ ನಿರ್ಲಕ್ಷ್ಯದಿಂದ ಸವಾರ ಮಲ್ಲಿಕಾರ್ಜುನ ಎಂಬವರು ಬೈಕ್ ಚಾಲನೆ ಮಾಡಿದ್ದರು. ಇದರಿಂದ ಹಿಂಬದಿ ಕುಳಿತಿದ್ದ ಸವಾರನ ಪತ್ನಿ ಗಿರಿಜಮ್ಮ(48) ಅವರ ತಲೆಗೆ ಟೋಲ್ ಗೇಟ್ ತಡೆಗಂಬ ಬಡಿದ ಪರಿಣಾಮ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಟೋಲ್ ಗೇಟ್ ಹಾಕಿದ್ದರೂ ಸೈಡಿಗೆ ಹೋಗದೆ, ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿದ್ದರಿಂದ ದುರಂತ ಸಂಭವಿಸಿದೆ. ಗೇಟ್ನಲ್ಲಿ ತಲೆ ಬಾಗಿ ಬೈಕ್ ಚಾಲನೆ ಮಾಡಿದ್ದ ಸವಾರ, ಹಿಂದೆ ಕುಳಿತ ಪತ್ನಿಯ ಬಗ್ಗೆ ಯೋಚನೆ ಮಾಡದೆ ವಾಹನ ಚಲಾಯಿಸಿದ್ದಾರೆ. ಮಲ್ಲಿಕಾರ್ಜುನ ತನ್ನ ಪತ್ನಿಯನ್ನು ದಾವಣಗೆರೆಗೆ ಕರೆದುಕೊಂಡು ಹೋಗುವಾಗ ಘಟನೆ ಸಂಭವಿಸಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಮನಗರ: ಬೈಕ್-ಕೆಎಸ್ಆರ್ಟಿಸಿ ಬಸ್ ಡಿಕ್ಕಿ - ತಂದೆ, ಇಬ್ಬರು ಮಕ್ಕಳು ಸಾವು
ಇದನ್ನೂ ಓದಿ:ಹಾವೇರಿ: ಟೋಲ್ಗೇಟ್ ಹಾಕಿದ್ದರೂ ಸ್ಕೂಟಿ ಚಾಲನೆ; ತಡೆಗಂಬ ಬಡಿದು ಪತ್ನಿ ಸಾವು - TOLLGATE ACCIDENT