ಬೆಂಗಳೂರು:ಹೆತ್ತ ಮಕ್ಕಳನ್ನೇ ಕೊಂದು ಸೆರೆವಾಸದಲ್ಲಿದ್ದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಏಪ್ರಿಲ್ 9 ರಂದು ಜಾಲಹಳ್ಳಿ ವಿಲೇಜ್ನಲ್ಲಿ ಮಂಗಳವಾರ ರಾತ್ರಿ ತನ್ನ ಇಬ್ಬರು ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಗಂಗಾದೇವಿ ಕೊಂದು ಹಾಕಿದ್ದಳು. ಘಟನೆ ಬಳಿಕ ಅಂದರೆ ಬುಧವಾರ ಬೆಳಿಗ್ಗೆ 112 ಗೆ ಕರೆ ಮಾಡಿದ್ದ ಗಂಗಾದೇವಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಪೊಲೀಸರಿಗೆ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಗಾದೇವಿಯನ್ನು ವಶಕ್ಕೆ ಪಡೆದಿದ್ದರು.
ಕೊಲೆ ಆರೋಪವನ್ನು ಒಪ್ಪಿಕೊಂಡ ಹಿನ್ನೆಲೆ ಗಂಗಾದೇವಿಯನ್ನು ಗುರುವಾರ ಪರಪ್ಪನ ಅಗ್ರಹಾರ ಜೈಲಿಗೆ ಬಿಡಲಾಗಿತ್ತು. ಅದೇ ದಿನ ರಾತ್ರಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆ ಮಾಡಿ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರ ಮೂಲದ ಗಂಗಾದೇವಿ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಆರೋಪಿ ಗಂಗಾದೇವಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಪೋಕ್ಸೊ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಇತ್ತ ಏನೂ ಅರಿಯದ ಇಬ್ಬರು ಮಕ್ಕಳು ಬಲಿಯಾಗಿರುವುದು ದುರದೃಷ್ಟಕರ.
ಇದನ್ನೂ ಓದಿ :ಬೆಂಗಳೂರು: ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಪೊಲೀಸರಿಗೆ ಕರೆ ಮಾಡಿದ ತಾಯಿ - Children Murder