ಮಂಗಳೂರು: ಮಾನ್ಸೂನ್ ಮಾರುತಗಳು ಈಗಾಗಲೇ ರಾಜ್ಯ ಪ್ರವೇಶಿಸಿವೆ. ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ವಿಳಂಬವಾಗಿ ಆರಂಭಗೊಂಡಿದೆ. ಮಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಅಬ್ಬರಿಸುತ್ತಿದ್ದು, ನಗರದ ಜನತೆ ಸಂತಸಗೊಂಡಿದ್ದಾರೆ.
ಮೇ ತಿಂಗಳಾಂತ್ಯದಲ್ಲಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. ವಾಡಿಕೆಯಂತೆ ಕೇರಳಕ್ಕೆ ಮುಂಗಾರು ಆಗಮನದ ಎರಡು ದಿನಗಳ ಅಂತರದಲ್ಲಿ ಕರಾವಳಿ ಪ್ರವೇಶಿಸಿ, ನಂತರ ಇಡೀ ರಾಜ್ಯಕ್ಕೆ ಮಳೆಯ ಸಿಂಚನವಾಗಬೇಕು. ಅದರಂತೆ, ಜೂನ್ 2ರಂದು ಕರಾವಳಿಗೆ ಮುಂಗಾರಿನ ಆಗಮನವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಜೂನ್ 6ರವರೆಗೂ ಮಳೆ ಹನಿಯಾಯಿತೇ ಹೊರತು ಅಬ್ಬರಿಸಲಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ನಿರಾಶರಾಗಿದ್ದರು.