ಕರ್ನಾಟಕ

karnataka

ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ - KARNATAKA RAIN FORECASTING

By ETV Bharat Karnataka Team

Published : Jun 8, 2024, 6:07 PM IST

ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ (IANS)

ಬೆಂಗಳೂರು: ಮುಂಗಾರು ಮಳೆ ರಾಜ್ಯದಲ್ಲಿ ಆರ್ಭಟಿಸುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಬಿರು ಬಿಸಿಲು, ನೀರಿನ ಹಾಹಾಕಾರದಿಂದ ಬಸವಳಿದಿದ್ದ ಕರುನಾಡಿನ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ಅವಾಂತರವನ್ನು ಸಹ ಸೃಷ್ಟಿಸಿದೆ. ಸದ್ಯ ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.

ಮುಂದಿನ 24 ಗಂಟೆಗಳಿಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ಪ್ರತಿ ಗಂಟೆಗೆ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆ ಬೀಳಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: Watch; ಬೆಳಗಾವಿಯಲ್ಲಿ ವರುಣಾರ್ಭಟ: ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು, ಭಕ್ತರ ಪರದಾಟ - Savadatti Yellamma Temple

ಇನ್ನು ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಅಲರ್ಟ್ ನೀಡದ ಹೆಚ್ಚಿನ ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಮೀನುಗಾರರಿಗೆ ಎಚ್ಚರಿಕೆ: ಚಂಡಮಾರುತದಿಂದ ಗಂಟೆಗೆ 45 ಕಿ.ಮೀ ಯಿಂದ 55 ಕಿ.ಮೀ ವರೆಗೆ ಗಾಳಿ ಸಹ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ: ಶನಿವಾರ ಮತ್ತು ಭಾನುವಾರ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಶುಕ್ರವಾರ ಎಲ್ಲಿ ಅತೀ ಹೆಚ್ಚು ಮಳೆ?:ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಅತೀ ಹೆಚ್ಚು 23 ಸೆ.ಮೀ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಕಾರವಾರ ಒಬ್ಸಿಯಲ್ಲಿ 22, ಗೋಕರ್ಣದಲ್ಲಿ 20, ಕುಮಟಾದಲ್ಲಿ 20 ಸೆ.ಮೀ ಮಳೆಯಾಗಿದೆ.

ಇದನ್ನೂ ಓದಿ: ಗೋಕರ್ಣದಲ್ಲಿ ಮಳೆ ಅವಾಂತರ: ಪರಶಿವನ ಗರ್ಭಗುಡಿಗೆ ನುಗ್ಗಿದ ನೀರು - Heavy Rain in Uttara Kannada

ABOUT THE AUTHOR

...view details