ಉಡುಪಿ:ಹೆಮ್ಮಾಡಿ ಯಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಿಂದ ಶುಕ್ರವಾರ ರಾತ್ರಿ ಕದ್ದೊಯ್ದ ಹಣವನ್ನು ಕಳ್ಳನು ಅಲ್ಲಿಯೇ ಸಮೀಪದ ಶಾಲೆಯೊಂದರಲ್ಲಿ ಇಟ್ಟು ಹೋಗಿದ್ದು, ಅದು ಸೋಮವಾರ ಸಂಜೆ ವೇಳೆ ಪತ್ತೆಯಾಗಿದೆ.
ಸೋಮವಾರವೇ ದೇವಸ್ಥಾನದಲ್ಲಿ ಹುಣ್ಣಿಮೆ ದಿನ ಸತ್ಯನಾರಾಯಣ ಪೂಜೆ ನಡೆದಿತ್ತು. ಕಳ್ಳತನವಾದುದರಲ್ಲಿ ಸ್ವಲ್ಪ ಹಣ ಹುಣ್ಣಿಮೆ ದಿನವೇ ಸಿಕ್ಕಿರುವುದು ವಿಶೇಷ. ಶುಕ್ರವಾರ ಮಧ್ಯರಾತ್ರಿ ದೇಗುಲದ ಬಾಗಿಲು ಮುರಿದು ಒಳ ನುಗ್ಗಿದ್ದ ಕಳ್ಳ ಹುಂಡಿಯಲ್ಲಿದ್ದ ಹಣ, ಅರ್ಚಕರ ಕೊಠಡಿಯಲ್ಲಿದ್ದ ರಶೀದಿ ಹಣವನ್ನು ಕದ್ಯೊಯ್ದಿದ್ದ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಮೀಪದ ಮೂರು ಮನೆಗಳಿಂದಲೂ ಚಿಲ್ಲರೆ ಹಣವನ್ನು ಕದ್ದಿದ್ದ. ದೇವಸ್ಥಾನಕ್ಕಿಂತ ತುಸು ದೂರದಲ್ಲಿರುವ ಹೆಮ್ಮಾಡಿಯ ಸರ್ಕಾರಿ ಹಿ.ಪ್ರಾ.ಶಾಲೆಯ ಜಗಲಿಯಲ್ಲಿ ಹಸಿರು ಚೀಲ ಇದ್ದುದನ್ನು ಶನಿವಾರವೇ ಶಿಕ್ಷಕರು ಗಮನಿಸಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.