ಕರ್ನಾಟಕ

karnataka

ETV Bharat / state

ಪ್ರಧಾನಿ ಇಡಿ, ಐಟಿ ಛೂಬಿಟ್ಟು ಕಂಪನಿಗಳಿಂದ ಹಣ ಸುಲಿಗೆ ಮಾಡಿಸಿದ್ದಾರೆ: ಯತೀಂದ್ರ

ಪ್ರಧಾನಿಯವರು ಇ.ಡಿ, ಐಟಿ ಛೂಬಿಟ್ಟು ಕಂಪನಿಗಳಿಂದ ಸುಲಿಗೆ ಮಾಡಿಸಿದ್ದಾರೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ದೇಶಕ್ಕೆ ಅದಕ್ಕಿಂತ ದೊಡ್ಡ ದುರಂತ ಬೇರಿಲ್ಲ ಎಂದು ಎಂಎಲ್​ಸಿ ಯತೀಂದ್ರ ಟೀಕಿಸಿದ್ದಾರೆ.

ಯತೀಂದ್ರ
ಯತೀಂದ್ರ (ETV Bharat)

By ETV Bharat Karnataka Team

Published : Nov 10, 2024, 3:42 PM IST

ಹುಬ್ಬಳ್ಳಿ:"ಪ್ರಧಾನಿ ಮೋದಿ ದೇಶದಲ್ಲಿ ಚುನಾವಣಾ ಬಾಂಡ್ ತರುವ ಮೂಲಕ ಇಡೀ ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟ ಮಾಡಿದ್ದಾರೆ. ಅಂಥವರಿಗೆ ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ" ಎಂದು ಎಂಎಲ್​ಸಿ ಯತೀಂದ್ರ ತಿರುಗೇಟು ನೀಡಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರಧಾನಿಯವರು ಇ.ಡಿ, ಐಟಿ ಛೂಬಿಟ್ಟು ಕಂಪನಿಗಳಿಂದ ಸುಲಿಗೆ ಮಾಡಿಸಿದ್ದಾರೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ದೇಶಕ್ಕೆ ಅದಕ್ಕಿಂತ ದೊಡ್ಡ ದುರಂತ ಬೇರಿಲ್ಲ. ಮುಡಾ ಹಗರಣದಲ್ಲಿ ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದರಲ್ಲಿ ಅರ್ಥವಿಲ್ಲ. ಅವರು ಪ್ರಕರಣವನ್ನು ಪಾರದರ್ಶಕವಾಗಿ, ನ್ಯಾಯೋಚಿತವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ ವಿಪಕ್ಷದವರು ಜನರಲ್ಲಿ ಈ ಬಗ್ಗೆ ತಪ್ಪು ಸಂದೇಶ ನೀಡುತ್ತಿದ್ದಾರೆ" ಎಂದು ಹೇಳಿದರು.

ಎಂಎಲ್​ಸಿ ಯತೀಂದ್ರ (ETV Bharat)

"ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಬೇಕು. ಅದನ್ನು ಬೀಳಿಸಬೇಕು. ಅದಕ್ಕೆ ತಡೆಯಾದ ಸಿಎಂ ಸಿದ್ದರಾಮಯ್ಯ ಅವರನ್ನು ಮೊದಲು ಕೆಳಗಿಳಿಸಿದರೆ ಕಾಂಗ್ರೆಸ್ ಶಕ್ತಿಹೀನವಾಗುತ್ತದೆ ಎಂದು ಅವರ ಮೇಲೆ ಇ.ಡಿ ದಾಳಿ ಮಾಡಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಕಾಂಗ್ರೆಸ್​ ಮುಖಂಡರ ಮೇಲೆ ಇ.ಡಿ ದಾಳಿ ನಡೆಸಿ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಿವೆ" ಎಂದು ಆರೋಪಿಸಿದರು.

"ಚನ್ನಪಟ್ಟಣದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಷದವರು ಖುರಾನ್ ಪುಸ್ತಕ, ಪ್ರಾರ್ಥನೆಗಾಗಿ ಮ್ಯಾಟ್ ಜೊತೆ ಒಂದು ಸಾವಿರ ರೂ. ಕೊಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅಂಥವರು ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ರೀತಿ ವಿಪಕ್ಷದವರು ಪ್ರತಿ ಚುನಾವಣೆ ಸಂದರ್ಭದಲ್ಲಿ ಆಪಾದಿಸುವುದು ಸಾಮಾನ್ಯ" ಎಂದು ಡಾ. ಯತೀಂದ್ರ ಟೀಕಿಸಿದರು.

"ಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲ್ಲಲಿದೆ. ಎಲ್ಲೆಡೆ ಪಕ್ಷದ ಪರ ಉತ್ತಮ ವಾತಾವರಣವಿದೆ" ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್​

ABOUT THE AUTHOR

...view details