ಹಾವೇರಿ:ಕೇಂದ್ರದಲ್ಲಿರುವುದು ಕಿಚಡಿ ಸರ್ಕಾರ. ಇದಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು. ಹಾವೇರಿಯಲ್ಲಿಂದು ಮಾತನಾಡಿದ ಅವರು, ಸರ್ಕಾರ ಯಾವಾಗ ಕುಸಿಯುತ್ತೋ ಗೊತ್ತಿಲ್ಲ ಎಂದರು.
ದೇಶದ ಜನ ಸಂವಿಧಾನ ರಕ್ಷಣೆ ಮಾಡುವ ತೀರ್ಪು ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಮೂರು ರೂಪಾಯಿ ಏರಿಕೆ ಮಾಡಿದ್ದಕ್ಕೆ ಬಿಜೆಪಿಯವರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜನರು ಸಂವಿಧಾನ ರಕ್ಷಣೆಯತ್ತ ಒಲವು ತೋರಿದ್ದಾರೆ. ಇವರಿಂದ ನಾವು ಪಾಠ ಕಲಿಯಬೇಕಾ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಒಂದೆಡೆ ನಾಯ್ಡು ಮತ್ತೊಂದು ಕಡೆ ನಿತೀಶ್ ಅವರನ್ನಿಟ್ಟುಕೊಂಡು ನೀವು ಸರ್ಕಾರ ಮಾಡುತ್ತಿದ್ದೀರಿ. ನಿಮ್ಮ ಸರ್ಕಾರ ಯಾವಾಗ ಬೀಳುತ್ತೆ ಅಂತ ಗೊತ್ತಿಲ್ಲ ಎಂದು ಹೇಳಿದರು.
2014ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 65 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ದರ 100ರ ಗಡಿ ದಾಟಿದೆ. ಅವಾಗ ಬಿಜೆಪಿಯವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ನಿಲ್ಲಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.