ಹಾವೇರಿ:ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲವಾಗಿ ಕಟ್ಟಿದವರು ಇಬ್ಬರೇ. ಒಬ್ಬರು ಯಡಿಯೂರಪ್ಪನವರು, ಮತ್ತೊಬ್ಬರು ಈಶ್ವರಪ್ಪ. ಈಶ್ವರಪ್ಪನವರು ಶ್ರಮ ವಹಿಸಿದರು, ಆದರೆ ಧೈರ್ಯ ಮಾಡಲಿಲ್ಲ.ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ದೆಹಲಿಯಿಂದ ಕೂಗು ಬಂತು ಅದನ್ನು ಅಲ್ಲಿಯೇ ಕೈಬಿಟ್ಟು ಬಂದರು. ಅವರಿಗೆ ಪಕ್ಷ ನಿಷ್ಠೆ ಇದೆ ಆದರೆ ಧೈರ್ಯ ಇಲ್ಲ. ಸದ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನೋಡೋಣ ದೈವ ಏನು ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕುರುಬರಿಗೆ ಟಿಕೆಟ್ ಕೊಟ್ಟಿಲ್ಲ, ವೋಟ್ ಯಾಕೆ ಕೇಳುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ನಲ್ಲಿ ಕುರುಬರಿಗೆ 2 ಟಿಕೆಟ್ ಕೊಟ್ಟಿದ್ದಾರೆ ನಿಜ, ಬಿಜೆಪಿಯಲ್ಲಿ ಒಂದೂ ಟಿಕೆಟ್ ಕೊಟ್ಟಿಲ್ಲ ಅನ್ನೋದು ನಿಜ. ಬಿಜೆಪಿಯವರು ವೋಟ್ ಯಾಕೆ ಕೇಳಬಾರದು. ಹಾಗಾದರೆ ಎಲ್ಲಾ ಜಾತಿಯವರಿಗೂ ಎಲ್ಲಾ ಪಕ್ಷಗಳು ಟಿಕೆಟ್ ನೀಡಿವಿಯೇ, ಕಾಂಗ್ರೆಸ್ನವರು ರಾಜ್ಯದಲ್ಲಿರುವ ಎಲ್ಲಾ ವರ್ಗದವರಿಗೂ ಟಿಕೆಟ್ ಕೊಟ್ಟಿದ್ದಾರಾ?. ಹಾಗದರೆ ನೀವು ಬೇರೆ ಜಾತಿಯವರ ಮತ ಕೇಳಬೇಡಿ ಎಂದು ಹೆಚ್ ವಿಶ್ವನಾಥ್ ತಿರುಗೇಟು ನೀಡಿದರು.