ಮೈಸೂರು: "ರಾಜ್ಯದ ಎಲ್ಲ ಜಾತಿ, ಭಾಷಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಕಾಂತರಾಜ ಆಯೋಗ ವರದಿ ಸಲ್ಲಿಸಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಬೇಕು" ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಒತ್ತಾಯಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಕಾಂತರಾಜ ಆಯೋಗದ ವರದಿ ತಯಾರಿಕೆಗೆ 160 ಕೋಟಿ ರೂಪಾಯಿ ಖರ್ಚಾಗಿದೆ. 1,33,410 ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. 1,351 ಜಾತಿಗಳ ಸಮೀಕ್ಷೆಯಾಗಿದೆ" ಎಂದು ಹೇಳಿದರು.
"ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವರದಿಯನ್ನು ಅವಲೋಕಿಸಿ ಇದು ವೈಜ್ಞಾನಿಕವಾಗಿದೆ ಎಂಬ ಸರ್ಟಿಫಿಕೆಟ್ ಅನ್ನು ಕೊಟ್ಟಿದೆ. ಇಷ್ಟಾದರೂ ನಮ್ಮ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಇದು ಅವೈಜ್ಞಾನಿಕ ಎನ್ನುತ್ತಾರೆ. ನಿನಗೆ ಓದಲೂ ಬರಲ್ಲ, ಬರೆಯಲೂ ಬರಲ್ಲ. ನೀನು ವಿರೋಧ ಪಕ್ಷದ ನಾಯಕ. ರಿಯಲ್ ಎಸ್ಟೇಟ್ ಗಿರಾಕಿಗಳೆಲ್ಲ ಅವೈಜ್ಞಾನಿಕ ಎನ್ನುತ್ತಾರೆ. ಹೆಚ್ ಡಿ ಕುಮಾರಸ್ವಾಮಿ ಅವರೇ ನೀವು ವರದಿಯನ್ನು ಓದಿದ್ದರಾ?. ವರದಿ ಬಿಡುಗಡೆಯಾಗಿ ಚರ್ಚೆಗಳು ನಡೆದ ನಂತರ ಜನರಿಗೆ ಸರಿಯಾದ ಮಾಹಿತಿ ಸಿಗುತ್ತದೆ. ಚಿತ್ರದುರ್ಗದಲ್ಲಿ ಸಭೆ ಕರೆದಿದ್ದಾರೆ. ಮೊದಲು ವರದಿಯನ್ನು ಸ್ವೀಕರಿಸಿ ಸಭೆ ಕರೆದಿದ್ದರೆ ಚೆನ್ನಾಗಿರುತ್ತಿತ್ತು. ತಕ್ಷಣ ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು" ಎಂದು ಆಗ್ರಹಿಸಿದರು.