ಮಂಡ್ಯ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಪಕ್ಷದ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಪಕ್ಷ ಸೇರುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದರು. "ಆ ಬಗ್ಗೆ ನಾನು ಯೋಚನೆ ಮಾಡಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು" ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ರವಾನಿಸಿದರು.
"ಕಾಂಗ್ರೆಸ್ನಿಂದ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಸ್ಪರ್ಧೆ ಮಾಡುವಂತೆ ಒತ್ತಡವಿದೆ. ಮುಂದೆ ನೋಡ್ತಿನಿ. ರಾಜಕಾರಣದಲ್ಲಿ ನಾವು-ನೀವು ಯಾರೂ ಊಹೆ ಮಾಡದ ಘಟನೆಗಳು ನಡೆಯುತ್ತಿವೆ. ಪಕ್ಷಾಂತರ ಮಾಡುವ ಯಾವುದೇ ಆಲೋಚನೆ ಇಲ್ಲ" ಎಂದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, "ಕಾನೂನು ಪ್ರಕ್ರಿಯೆ ಪ್ರಾರಂಭವಾಗಿದೆ. ಕಾನೂನು ಹೋರಾಟ ಮಾಡ್ತಿದ್ದಾರೆ. ನನಗೆ ಸ್ಪಷ್ಟ ಚಿತ್ರಣ ಇಲ್ಲ. ಮುಖ್ಯಮಂತ್ರಿಗಳು ಬಹಳ ಸೂಕ್ಷ್ಮಮತಿಯಿಂದ ಇದ್ದಾರೆ, ನೋಡೋಣ. ಚುನಾವಣಾ ಬಾಂಡ್ ಪ್ರಕರಣದಲ್ಲಿ ಕೇಂದ್ರ ಸಚಿವರ ಮೇಲೆ FIR ವಿಚಾರ ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ನೋಡಿಲ್ಲ" ಎಂದು ತಿಳಿಸಿದರು.