ದಾವಣಗೆರೆ:ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋತರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಸವಾಲು ಹಾಕಿದರು.
ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಅಭ್ಯಂತರವಿಲ್ಲ. ಬಿಜೆಪಿಯಲ್ಲಿ ಭಿನ್ನಮತವಿದೆ ಎನ್ನುವುದು ಸುಮ್ಮನೆ ನಾಟಕ. ಈ ಭಿನ್ನಮತ ಮಾಡುತ್ತಿರುವ ಎಂ.ಪಿ.ರೇಣುಕಾಚಾರ್ಯ ಹಾಗೂ ತಂಡದವರಿಗೆ ತಾಕತ್ ಇದ್ದರೆ ದಾವಣಗೆರೆಯಲ್ಲಿ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸೋತರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ" ಎಂದರು.
"ಬಿಜೆಪಿಯವರು ಈಗಾಗಲೇ ಚುನಾವಣೆಗೂ ಮುನ್ನ ಸೋಲು ಒಪ್ಪಿಕೊಂಡಿದ್ದಾರೆ. ಹೀಗೆ ಒಪ್ಪಿಕೊಂಡು ಅವರವರೇ ಭಿನ್ನಮತ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ತಾಯಂದಿರು ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ" ಎಂದು ಹೇಳಿದರು.
"ಇನ್ನು ಕಾಂಗ್ರೆಸ್ನಲ್ಲಿ ಕತ್ತೆಗೆ ಟಿಕೆಟ್ ನೀಡಿದರು ನಾವು ಬೆಂಬಲ ಕೊಡುತ್ತೇವೆ. ಕತ್ತೆಯನ್ನು ನಿಲ್ಲಿಸಿದರೂ ನಾವು ಓಟು ಹಾಕುತ್ತೇವೆ. ಸಚಿವರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆವು. ಈಗ ಅವರ ಪತ್ನಿಗೆ ಸಿಕ್ಕಿರುವುದು ಡಬಲ್ ಕೆಲಸವಾಗಿದೆ. ನಾವು ಅಭ್ಯರ್ಥಿ ಅನ್ನುವುದಕ್ಕಿಂತ ಕಾಂಗ್ರೆಸ್ ಎಂದು ಕೆಲಸ ಮಾಡುತ್ತೇವೆ. ಇನ್ನು ಚನ್ನಗಿರಿಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ಗೆ ಲೀಡ್ ಕೊಡಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಯಚೂರು ಕ್ಷೇತ್ರಕ್ಕೆ 'ಕೈ' ಪಕ್ಷ ಜಿ.ಕುಮಾರ ನಾಯಕ್ ಕಣಕ್ಕಿಳಿಸಿದ್ದೇಕೆ? ಲೆಕ್ಕಾಚಾರವೇನು? - G Kumar Naik