ದಾವಣಗೆರೆ: ಮೈಸೂರಿನ ಮುಡಾ ಹಗರಣ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೆಲ ದಿನಗಳಿಂದ ಬಹು ಚರ್ಚಿತ ವಿಷವಾಗಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ಮುಂದುವರಿದಿದೆ. ಈ ಮಧ್ಯೆ ಮುಖ್ಯಮಂತ್ರಿ ಸ್ಥಾನ ಖಾಲಿ ಆದ ಬಳಿಕ ಅವಕಾಶ ಸಿಕ್ಕರೆ ಲಿಂಗಾಯತ ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಸಿಎಂ ಸಿದ್ದರಾಮಯ್ಯ ಅವರು ಒಳ್ಳೆ ಆಡಳಿತ ಕೊಡುತ್ತಿದ್ದಾರೆ. ಅವರ ಅವಧಿ ಮುಗಿದ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ಯಾರನ್ನು ಆರಿಸುತ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡಲಿದೆ ಎಂದರು.
ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಲಿದೆ: ಸಿಎಂ ಸ್ಥಾನದ ಬಗ್ಗೆ ಸಚಿವರು ಕೊಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಸಚಿವರುಗಳಿಗೆ ಬೇಗ ಸಿಎಂ ಆಗೋಣ ಎಂಬ ಆಸೆ ಇದೆ. ಅದಕ್ಕೆ ಅವರು ಆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಆಗುವ ಆಸೆ ಇದ್ದವರಿಗೆ ನಿರಾಸೆ ಆಗಲಿದೆ ಎಂದು ಹೇಳಿದರು.
ಎಲ್ಲರೂ ಸಿಎಂ ಸ್ಥಾನ ಕೇಳುತ್ತಾರೆ ಏನ್ ಮಾಡೋದು. ಇನ್ನು ಶಿವಾನಂದ ಪಾಟೀಲ್, ಎಂ. ಬಿ. ಪಾಟೀಲ್, ಡಿ. ಕೆ. ಶಿವಕುಮಾರ್, ಬಸವರಾಜ ರಾಯರೆಡ್ಡಿ, ಬಿ. ಆರ್. ಪಾಟೀಲ್ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಸಿಎಂ ಕುರ್ಚಿ ಎಂದರೇ ಯಾರ್ ಬೇಡ ಎನ್ನುತ್ತಾರೆ ಅಂದರು.