ಕರ್ನಾಟಕ

karnataka

ವಿಜಯೇಂದ್ರ ನಾಯಕತ್ವ ನಾನು ಒಪ್ಪುವುದಿಲ್ಲ: ರಮೇಶ್​ ಜಾರಕಿಹೊಳಿ - Ramesh Jarakiholi

By ETV Bharat Karnataka Team

Published : Sep 16, 2024, 7:53 PM IST

Updated : Sep 16, 2024, 8:28 PM IST

ವಿಜಯೇಂದ್ರನ ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವನು ಜೂನಿಯರ್, ಅವನಿಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ ಎಂದು ಶಾಸಕ ರಮೇಶ್​ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ರಮೇಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ (ETV Bharat)

ರಮೇಶ್​ ಜಾರಕಿಹೊಳಿ (ETV Bharat)

ಚಿಕ್ಕೋಡಿ(ಬೆಳಗಾವಿ): "ಬಿಜೆಪಿಗೆ ಭ್ರಷ್ಟ ಎಂಬ ಲೇಬಲ್ ಕೊಟ್ಟವನೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ. ವಿಜಯೇಂದ್ರನ ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಜೂನಿಯರ್, ಅವನಿಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ" ಎಂದು ಶಾಸಕ ರಮೇಶ್​ ಜಾರಕಿಹೊಳಿ ಬಿವೈವಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಅಥಣಿ ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಯಡಿಯೂರಪ್ಪನವರನ್ನು ಯಾವತ್ತೂ ವಿರೋಧ ಮಾಡುವುದಿಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕರು. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಬಿಜೆಪಿ ಒಬ್ಬರ ಕಪಿಮುಷ್ಠಿಯಲ್ಲಿ ಇರುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್​ ಮೇಲೆ ಕುಳಿತರೆ ಸರ್ವಾಧಿಕಾರಿ ಧೋರಣೆ ಬರುತ್ತದೆ" ಎಂದರು.

"ಹೀಗಾಗಿ 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಪಕ್ಷವನ್ನು ಕೊಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ವರಿಷ್ಠರು, ನೀವು ಈ ಕೆಲಸ ಮಾಡುವಂತೆ ಟಾಸ್ಕ್ ನೀಡಲಿ. 15 ರಿಂದ 20 ಜನರ ನಾಯಕತ್ವಕ್ಕೆ ಲೀಡರ್‌ಶಿಪ್‌ ಕೊಡಿ. 120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ಕೊಟ್ಟಂತಹ ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಹೊರಗೆ ಹಾಕಿ. ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು, ಅವರಿಗೆ ವಿಶ್ರಾಂತಿ ಅಗತ್ಯವಿದೆ. ಅವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ" ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ವಿಚಾರವಾಗಿ ಮಾತನಾಡಿ, "ನಮ್ಮ ಪಕ್ಷ ಬೇರೆ ಇದೆ, ಸತೀಶ್ ಜಾರಕಿಹೊಳಿ ಪಕ್ಷ ಬೇರೆ ಇದೆ. ನಮ್ಮ ನಮ್ಮ ಪಕ್ಷಗಳ ಸಿದ್ಧಾಂತ ಬೇರೆ ಬೇರೆ. ಅವರ ಪಕ್ಷದಲ್ಲಿ ಆಂತರಿಕ ವಿಚಾರ ನಮಗೆ ಗೊತ್ತಿಲ್ಲ. ನಾವು ಮನೆಯಲ್ಲಿ ಮಾತ್ರ ಸಹೋದರರು. ಪಕ್ಷ ಬಂದರೆ ನಾವು ಬೇರೆ ಬೇರೆ" ಎಂದು ರಮೇಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಶಾಸಕ ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು ಕೈವಾಡ: ರಮೇಶ್ ಜಾರಕಿಹೊಳಿ ಆರೋಪ - Ramesh Jarakiholi

Last Updated : Sep 16, 2024, 8:28 PM IST

ABOUT THE AUTHOR

...view details