ಮಂಡ್ಯ: ಮಾಜಿ ಸಚಿವ ಪುಟ್ಟರಾಜು ಅವರು ವೀರಾವೇಷದಲ್ಲಿ ನನ್ನ ವಿರುದ್ಧ ದುಷ್ಟ ಶಾಸಕ ಎಂದು ಹೇಳಿದ್ದಾರೆ. ಆದರೆ ಆ ರೀತಿ ಯಾರಿದ್ದರು ಎಂದು ಮಂಡ್ಯದ ಜನ ಹೇಳುತ್ತಾರೆ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಪುಟ್ಟರಾಜು ನನ್ನ ವಿರುದ್ಧ ಮಾತನಾಡಿದ್ದಾರೆ. ವೀರಾವೇಷದ ಟೀಕೆಗಳಲ್ಲಿ ವಾಸ್ತಾವಾಂಶ ಇರಬೇಕು ಎಂದರು. ದಬ್ಬಾಳಿಕೆ, ದೌರ್ಜನ್ಯ, ಒಂದು ವರ್ಗವನ್ನು ವಿರೋಧಿಸುತ್ತಿದ್ದೇನೆ ಎಂದಿದ್ದಾರೆ. ಪುಟ್ಟರಾಜು ಅವರೇ, ನಮ್ಮ ಪಕ್ಷದ ಆಂತರಿಕ ವಿಚಾರಕ್ಕೂ ನಿಮಗೂ ಏನು ಸಂಬಂಧ. ಸಂಸದೆ ಸುಮಲತಾ ಯಾರ ಬಗ್ಗೆ ಏನು ಮಾತನಾಡಿದ್ರು ಅಂತ ಮಂಡ್ಯ ಜನ ಮಾತನಾಡ್ತಾರೆ. ಗಣಿಗಾರಿಕೆ, ಕನ್ನಂಬಾಡಿ ವಿಚಾರದಲ್ಲಿ ಯಾರು ಮಾತನಾಡಿದ್ದಾರೆ ಗೊತ್ತಿದೆ ಎಂದರು.
2008ರಲ್ಲಿ ನನಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಆಗ ನಾನು ಪಕ್ಷೇತರನಾಗಿ ನಿಂತು ಗೆದ್ದೆ. ಕಾಂಗ್ರೆಸ್ ಬಂಡಾಯ ಎದ್ದು ಚುನಾವಣೆ ಎದುರಿಸಿದ್ವಿ. ಅದಕ್ಕೆ ಉತ್ತರವನ್ನು ಜಯದೊಂದಿಗೆ ಕೊಟ್ಟಿದ್ವಿ. ಜೆಡಿಎಸ್ ವಿರುದ್ದ ನಾನು ಪಕ್ಷೇತರನಾಗಿ ಗೆದ್ದಿದ್ದೆ. ಯಡಿಯೂರಪ್ಪನವರು ಸಂಪರ್ಕಿಸಿ ಬೆಂಬಲ ಕೋರಿದ್ದರು. ನಾನು ಬೆಂಬಲ ಕೊಟ್ಟಿದೆ ಎಂದು ತಿಳಿಸಿದರು.
ಇವತ್ತಿನಿಂದ ನಾನು ಪುಟ್ಟರಾಜು ಅಂತ ಕರೆಯಲ್ಲ. ಮಾಜಿ ಸಚಿವ ಪುಟ್ಟರಾಜು ಅವರನ್ನು ಇನ್ಮೇಲೆ ಮಹಾನ್ ದೊಡ್ಡರಾಜು ಅಂತಾ ಕರೆಯುತ್ತೇನೆ. ದೊಡ್ಡ ದೊಡ್ಡ ಮಾತನ್ನು ಆಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು ನನ್ನ ಶಕ್ತಿ ಇತ್ತು. ನಾನೂ ಕೂಡ ಸಚಿವನಾಗಿದ್ದೆ. ಯಡಿಯೂರಪ್ಪ ಸರ್ಕಾರವನ್ನು ತೆಗೆಯಲು ನಮ್ಮನ್ನು ಎಲ್ಲೆಲ್ಲಿಗೆ ಕರೆದುಕೊಂಡು ಹೋಗಿದ್ರಿ?. ಗೋವಾ, ಕೇರಳ, ಬಾಂಬೆ, ಚೆನ್ನೈ, ಕೊನೆಗೆ ಈಗಲ್ಟನ್ ರೆಸಾರ್ಟ್. ಮಹಾನ್ ನಾಯಕನಿಗೆ ಚ್ಯುತಿ ಬರುತ್ತೆ ಎಂದು ಸುಮ್ಮನಿದ್ದೀನಿ. ನನ್ನ ಮನೆ ಹಾಳು ಮಾಡಿದ್ದು ನೀವು. ನಾನು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗುತ್ತದೆ ಎಂದು ಪುಟ್ಟರಾಜು ಹಾಗೂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಹಾನಗಲ್: ಬೊಮ್ಮಾಯಿ ಮತಬೇಟೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ - Bommai Campaign