ಬೆಂಗಳೂರು:''ನವರಾತ್ರಿ ಅಕ್ಟೋಬರ್ 3ರಂದು ಆರಂಭವಾಗಲಿದೆ. ಇದೇ ಗುರುವಾರ ಬೆಳಗ್ಗೆ ಬಳ್ಳಾರಿಗೆ ಭೇಟಿ ಕೊಡಲಿದ್ದೇನೆ'' ಎಂದು ಶಾಸಕ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ''14 ವರ್ಷಗಳ ನಂತರ ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ. ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲಿ ಇರುತ್ತೇನೆ'' ಎಂದು ಭಾವುಕರಾಗಿ ನುಡಿದರು.
ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ: ''ಜನ್ಮ ಸ್ಥಳ ಪ್ರತಿಯೊಬ್ಬನಿಗೂ ಮುಖ್ಯವಾಗುತ್ತದೆ. ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು ಎಂಬುದು ಹಿರಿಯರ ಮಾತು. ಮೊದಲು ಗಂಗಾವತಿಗೆ ತೆರಳಿ, ಹನುಮಂತನ ದರ್ಶನ ಪಡೆದು ರಾಜಕೀಯ ಪುನರ್ಜನ್ಮ ನೀಡಿದ ಜನರ ಜೊತೆ ಮಾತನಾಡುವೆ'' ಎಂದು ತಿಳಿಸಿದರು.