ಮಂಗಳೂರು (ದಕ್ಷಿಣ ಕನ್ನಡ) :ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು. ಟಿ ಖಾದರ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡುವೆ ಕಾಡಾನೆಗಳನ್ನು ಸಾಯಿಸುವ ವಿಚಾರದಲ್ಲಿ ಚರ್ಚೆಗಳಾಗಿತ್ತು. ಸದನದಲ್ಲಿ ಕಾಡಾನೆಗಳನ್ನು ಗುಂಡಿಟ್ಟು ಕೊಲ್ಲಲು ಅವಕಾಶ ನೀಡಬೇಕು ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದರು. ಅದಕ್ಕೆ ಸ್ಪೀಕರ್ ಯು. ಟಿ ಖಾದರ್ ಅವರು ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬ ಪಾಠ ಮಾಡಿದ್ದರು. ಇದೇ ವಿಚಾರವಾಗಿ ಇದೀಗ ಸದನದ ಹೊರಗೂ ಚರ್ಚೆ ಮುಂದುವರೆದಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಪ್ರಾಣಿಗಳ ಮೇಲೆ ಕಾಳಜಿಯಿರುವ ಸ್ಪೀಕರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಆಗ್ರಹಿಸಲಿ ಎಂದು ಹೇಳಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪೀಕರ್ ಯು. ಟಿ ಖಾದರ್ ಅವರು, ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದಾಗ ಅದೆಷ್ಟು ಅನುಷ್ಠಾನಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮರು ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿದ್ದು ಹೀಗೆ : ಕಾಂಗ್ರೆಸ್ ಸರ್ಕಾರ ಗೋಹತ್ಯೆ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ. ಆನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆಯಿಂದಾಗಿ ಆನೆಗಳನ್ನ ಕೊಲ್ಲಲು ಅವಕಾಶ ಕೊಡಬೇಕೆಂದು ಸದನದಲ್ಲಿ ಮಾತನಾಡಿದ್ದೆ. ಆದರೆ ಸ್ಪೀಕರ್ ಯು. ಟಿ ಖಾದರ್ ಮನುಷ್ಯರಿಗೆ ಮಾತ್ರವಲ್ಲ, ಆನೆಗಳಿಗೂ ಬದುಕುವ ಹಕ್ಕಿದೆ ಎಂದಿದ್ದರು. ಹಾಗಾದರೆ ಗೋವುಗಳಿಗೆ ಬದುಕುವ ಹಕ್ಕು ಇದೆಯಲ್ವಾ? ದಯವಿಟ್ಟು ಅವರು ಗೋಹತ್ಯೆ ನಿಲ್ಲಿಸಬೇಕೆಂದು ಹೇಳಿಕೆ ಕೊಡಲಿ. ಬಿಜೆಪಿಯಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಸರ್ಕಾರ ಅದನ್ನು ವಾಪಾಸು ಪಡೆದಿದೆ. ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದಲ್ಲಿ ಖಾದರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ ಎಂದು ಆಗ್ರಹಿಸಿದರು.
ಮೃತ್ಯುಂಜಯ ನದಿಗೆ ದನದ ಮಾಂಸ ಎಸೆಯುವ ಮೂಲಕ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಎಚ್ಪಿ - ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟಿವೆ.