ಚಿಕ್ಕಮಗಳೂರು:ವಿಶ್ವ ಹಿಂದೂ ಪರಿಷತ್, ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿ ನಿಮಿತ್ತ ನಗರದಲ್ಲಿ ಶೋಭಾಯಾತ್ರೆ ಜರುಗಿತು.
ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸಿದರು. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ದತ್ತ ಭಕ್ತರೊಂದಿಗೆ ಹೆಜ್ಜೆ ಹಾಕಿದರು. ಯಾತ್ರೆಯಲ್ಲಿ ವೀರಗಾಸೆ ಕತ್ತಿ ಹಿಡಿದ ಸಿ.ಟಿ. ರವಿ ಮೇಲಿಂದ ಎಸೆದ ತೆಂಗಿನಕಾಯಿ, ನಿಂಬೆಹಣ್ಣನ್ನು ಅದೇ ಕತ್ತಿಯಿಂದ ಬೀಸಿದರು.
ನಿಂಬೆ, ತೆಂಗಿನಕಾಯಿಗೆ ವೀರಗಾಸೆ ಕತ್ತಿಯಿಂದ ಬೀಸಿದ ಸಿ.ಟಿ ರವಿ (ETV Bharat) ಸಾವಿರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು, ಇವರೊಂದಿಗೆ ರಸ್ತೆ ಉದ್ಧಕ್ಕೂ ಯುವಜನತೆ ಕುಣಿಯುತ್ತಾ ಸಾಗಿದ್ದು ವಿಶೇಷವಾಗಿತ್ತು.
ಮನೆ ಮನೆಗೆ ತೆರಳಿ ಸಿಟಿ ರವಿ ಭಿಕ್ಷಾಟನೆ:ಶಾಸಕರು ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಕ್ಷಾಟಣೆ ನಡೆಸಿದರು. ಈ ಮೂಲಕ ಮಾಲಾಧಾರಿಗಳಿಂದ ಪಡಿ ಸಂಗ್ರಹ ಮಾಡಲಾಯಿತು. ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ ಅಡಿಕೆ - ಬೆಲ್ಲವನ್ನು ಸ್ಥಳೀಯರು ನೀಡಿದರು. ಇಂದು ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಇದೆಲ್ಲವನ್ನು ಅರ್ಪಣೆ ಮಾಡಲಾಗುವುದು. ಹಾಗೇ ಇಂದು 'ಇನಾಂ ದತ್ತಾತ್ರೇಯ' ಪೀಠದಲ್ಲಿ ದತ್ತಜಯಂತಿ ಅದ್ಧೂರಿಯಾಗಿ ಜರುಗಲಿದೆ.
ಇದನ್ನೂ ಓದಿ:ಚಿಕ್ಕಮಗಳೂರು: 'ಅನುಸೂಯ ಜಯಂತಿ'ಗೆ ಚಾಲನೆ; ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಭಾಗಿ
ಭಾರಿ ಗಾಳಿ, ಮಳೆಗೆ ಹಾರಿ ಹೋದ ಶೆಡ್ ಶೀಟ್:ಭಾರೀ ಗಾಳಿ-ಮಳೆಯಿಂದಾಗಿ ದತ್ತಪೀಠದಲ್ಲಿ ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ನಿರ್ಮಿಸಲಾದ ಶೆಡ್ಗಳ ಶೀಟ್ಗಳು ಹಾರಿ ಹೋದ ಘಟನೆ ನಡೆಯಿತು. ರಸ್ತೆಯೇ ಕಾಣದಂತೆ ಭಾರೀ ಮಂಜು ಕವಿದಿತ್ತು. ಜಿಲ್ಲಾಡಳಿತದಿಂದ ಮತ್ತೆ ಶೆಡ್ ದುರಸ್ತಿ ಕಾರ್ಯ ನಡೆದಿದೆ. ಶನಿವಾರ ದತ್ತಜಯಂತಿಯ ಕೊನೆ ದಿನವಾಗಿದೆ. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ದತ್ತಪೀಠಕ್ಕೆ ಆಗಮಿಸಿ ದತ್ತ ಪಾದುಕೆಯ ದರ್ಶನವನ್ನು ಪಡೆಯಲಿದ್ದಾರೆ.
ಗಾಳಿ, ಮಳೆಯಿಂದಾಗಿ ಹಾಳಾಗಿರುವ ಭಕ್ತಾದಿಗಳ ದರ್ಶನದ ಅನುಕೂಲಕ್ಕಾಗಿ ನಿರ್ಮಿಸಿದ್ದ ಶೆಡ್, ಹೋಮ ನಡೆಯುವ ಸ್ಥಳದಲ್ಲಿನ ಶೆಡ್, ಮೇಲ್ಚಾವಣಿಗಳನ್ನು ಪರಿಶೀಲಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಲು ಅನುಸರಿಸಬೇಕಾದ ಎಲ್ಲ ವ್ಯವಸ್ಥೆಗಳ ಕುರಿತು ದತ್ತ ಜಯಂತಿ ವ್ಯವಸ್ಥಾಪನಾ ಸಮಿತಿ ಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.