ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಶ್ಚಲಾನಂದನಾಥ ಸ್ವಾಮೀಜಿ (ಡಾ.ಹೆಚ್.ಎಲ್. ನಾಗರಾಜು) ಅವರು ಇಂದು (ಶನಿವಾರ) ವಿಧಿ, ವಿಧಾನಗಳೊಂದಿಗೆ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದಿರುವ ಕೆಎಎಸ್ ಅಧಿಕಾರಿ, 49 ವರ್ಷದ ಡಾ.ಹೆಚ್.ಎಲ್. ನಾಗರಾಜು ಅವರನ್ನು ನೇಮಿಸಲಾಗಿದೆ ಎಂದು ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಶುಕ್ರವಾರ ತಿಳಿಸಿದ್ದರು.
ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೆಚ್.ಎಲ್.ನಾಗರಾಜು ಅವರನ್ನು ಉತ್ತರಾಧಿಕಾರಿಯಾಗಿ ಭಗವಂತನ ಇಚ್ಛೆಯಂತೆ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಮಠದ ಟ್ರಸ್ಟ್‌ನ ಎಲ್ಲ ಸದಸ್ಯರು ಸರ್ವಾನುಮಂತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ಮತ್ತು 'ನಾಥ' ಪರಂಪರೆಯಂತೆ ನಡೆಸಿಕೊಂಡು ಹೋಗಲಿದ್ದಾರೆ'' ಎಂದು ಮಾಹಿತಿ ನೀಡಿದ್ದರು.
ಧಾರ್ಮಿಕತೆ ಮತ್ತು ಸಮಾಜ ಸೇವಾ ಮನೋಭಾವ ಹೊಂದಿದ್ದ ನಾಗರಾಜ್ ಅವರು ಅವಿವಾಹಿತರಾಗಿಯೇ ಇದ್ದರು. ಶನಿವಾರದಿಂದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಮಹಾಸ್ವಾಮೀಜಿಯಾಗಿ ಮಠದ ಕಾರ್ಯಗಳು, ಶ್ರೀಮಠದ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗುತ್ತಾರೆ ಎಂದು ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದರು.
ಶನಿವಾರ (ಡಿಸೆಂಬರ್ 14) ಸಂಜೆ ಆರಂಭವಾಗುವ ವಿಧಿ, ವಿಧಾನ ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿವೆ. ಸುಮಾರು ಹತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರ ಸಮ್ಮುಖದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಸನ್ಯಾಸ ದೀಕ್ಷೆ ಪಡೆದು ಉತ್ತರಾಧಿಕಾರಿ ಪಟ್ಟಕ್ಕೇರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಠದ ಟ್ರಸ್ಟಿಗಳಾದ ದೊಡ್ಡಮನೆ ವೆಂಕಟೇಶ, ಆಡಿಟರ್ ನಾಗರಾಜ್, ಪಂಚಲಿಂಗಯ್ಯ, ಶಿವಲಿಂಗಯ್ಯ, ಮಾರಪ್ಪಣ್ಣ, ವಕೀಲರಾದ ಸಿದ್ದರಾಜು ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ಓದಿ: ಮಂಡ್ಯ: ಎಡಿಸಿ ಹುದ್ದೆ ತ್ಯಜಿಸಿ ಮತ್ತೆ ಸನ್ಯಾಸತ್ವ ಸ್ವೀಕರಿಸಲಿರುವ ಹೆಚ್.ಎಲ್.ನಾಗರಾಜು