ಬೆಂಗಳೂರು/ನವದೆಹಲಿ:ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿಯ ಮುಂದೆ ಹಾಜರಾದ ಬಳಿಕ ತಮ್ಮ ನಿಲುವಿನಲ್ಲಿ ತಣ್ಣಗಾದಂತೆ ಕಂಡು ಬಂದಿದೆ. ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಮಾತನಾಡಿದ ಯತ್ನಾಳ್, ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ದೆಹಲಿಯಲ್ಲಿ ಶಿಸ್ತು ಸಮಿತಿಯ ಓಂ ಪಾಠಕ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ''ಶಿವಮೊಗ್ಗದಲ್ಲಿ 'ಯತ್ನಾಳ್ ನಮ್ಮವರೇ' ಎಂಬ ಬಿಎಸ್ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಡಿಯೂರಪ್ಪ ಹೇಳಿಕೆ ಸ್ವಾಗತಿಸುತ್ತೇನೆ. 1 ಗಂಟೆ 15 ನಿಮಿಷಗಳ ಕಾಲ ಶಿಸ್ತು ಸಮಿತಿ ಮುಂದೆ ಸವಿಸ್ತಾರವಾಗಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ತೀರ್ಮಾನಗಳನ್ನು ತೆಗೆದುಕೊಳ್ತಾರೆ. ವಕ್ಫ್ ಬೋರ್ಡ್ ವಿರುದ್ಧದ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆಗೆ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಭಾವನೆಗಳನ್ನು ನಾಯಕರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ಇರಲು ಹೇಳಿದ್ದಾರೆ'' ಎಂದರು.
ನಾವು ಯಾವಾಗಲೂ ಹಿಂದುತ್ವದ ಪರ:''ಹೈಕಮಾಂಡ್ ನಾಯಕರು ಮಧ್ಯಪ್ರದೇಶ ಮಾಡಿದ್ದಾರೆ. ಕಾರ್ಯಕರ್ತರ ಭಾವನೆ ಅರಿತು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಪಕ್ಷ ಬಿಡುವ ಮೂರ್ಖತನದ ಕೆಲಸ ಮಾಡಲ್ಲ. ನಾವು ಅಷ್ಟು ದಡ್ಡರೂ ಅಲ್ಲ. ನಾವು ರಾಷ್ಟ್ರೀಯ ಸಿದ್ಧಾಂತ ಹೊಂದಿದ್ದವರು, ಹಿಂದುತ್ವದ ಪರ. ನಮಗೆ ಬಿಜೆಪಿ ಆಶಾ ಕಿರಣ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಹೊಸ ಪಕ್ಷ ಕಟ್ಟಿ ಸೋತು ಸುಣ್ಣವಾದವರ ಬಗ್ಗೆ ಯೋಚಿಸಬೇಕಿದೆ. ನಮ್ಮ ವಿಶ್ವಾಸ ಪಕ್ಷ, ಮೋದಿ ಮೇಲಿದೆ. ಅಮಿತ್ ಶಾ ಮತ್ತು ನಡ್ಡಾರನ್ನು ಭೇಟಿಯಾಗಿಲ್ಲ'' ಎಂದು ತಿಳಿಸಿದರು.