ಕರ್ನಾಟಕ

karnataka

ETV Bharat / state

ಗ್ಯಾರಂಟಿ ತೆಗೆದರೆ ಝೀರೋ ಆಗುತ್ತೇವೆಂದು ತೈಲ ದರ ಏರಿಕೆ ಮಾಡುತ್ತಿದ್ದಾರೆ : ಶಾಸಕ ಯತ್ನಾಳ್ - MLA BASANAGOUDA PATIL YATNAL - MLA BASANAGOUDA PATIL YATNAL

ವಿಜಯಪುರ ನಗರದಲ್ಲಿ ಇಂದು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ ಮಾತನಾಡಿದರು. ಈ ವೇಳೆ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದರು. ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

mla-basanagouda-patil
ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (ETV Bharat)

By ETV Bharat Karnataka Team

Published : Jun 18, 2024, 8:32 PM IST

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (ETV Bharat)

ವಿಜಯಪುರ : ಗ್ಯಾರಂಟಿ ತೆಗೆದರೆ ಝೀರೋ ಆಗುತ್ತೇವೆ ಎಂಬ ಕಾರಣದಿಂದ ತೈಲದ ದರವನ್ನು ಏರಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕ ಹಕ್ಕಿಲ್ಲ, ಗ್ಯಾರಂಟಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಪಕ್ಷದ ಮುಂದಿನ ಹೋರಾಟಗಳ ಕುರಿತು ಎನ್ ರವಿಕುಮಾರ್, ವೀರಣ್ಣ ಚರಂತಿಮಠ, ಅಭಯ ಪಾಟೀಲರೊಂದಿಗೆ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್​ನ ದುರಾಡಳಿತದ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುವುದು ಸೇರಿದಂತೆ, ನಾವೆಲ್ಲರೂ ಒಂದಾಗಿ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ವಿಚಾರವಾಗಿ ಚರ್ಚೆ ಆಗಿದೆ ಎಂದರು.

ಯಾವುದೇ ಪ್ರಮುಖ ವಿಚಾರವಾಗಿ ಚರ್ಚೆ ಆಗಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನದಿಂದ ಆರ್. ಅಶೋಕ್ ತೆಗೆಯುವ ಬಗ್ಗೆ ಅಥವಾ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಗದ್ದುಗೆಯಿಂದ ಕೆಳಗಿಳಿಸುವ ಬಗ್ಗೆ ಚರ್ಚೆ ಆಗಿಲ್ಲ ಎಂದರು. ನಾನು ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸಂಚಾರ ಮಾಡಿ ಪ್ರಚಾರ ಮಾಡಿದ್ದೆ. ಇನ್ನೂ ನಾಲ್ಕೈದು ಕ್ಷೇತ್ರದಲ್ಲಿ ನಾವು ಕಡಿಮೆ ಮತಗಳಿಂದ ಸೋತಿದ್ದೇವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸಾಕಷ್ಟು ಸುರಕ್ಷಿತವಾಗಿದ್ದೇವೆ ಎಂದು ಯತ್ನಾಳ್​ ಹೇಳಿದರು.

ಸಾರಿಗೆ ಬಸ್​ಗಳು ಲಾಭದಲ್ಲಿ ಇವೆ ಎಂದು ಹೇಳುವ ನೀವು ಗಂಡಸರಿಗೂ ಫ್ರೀ ಮಾಡಿ. ನಾನು ಎಂಎಲ್​ಎ ಇದ್ದೇನೆ. ಈ ಒಂದು ವರ್ಷದಲ್ಲಿ ಒಂದೇ ಒಂದು ಭೂಮಿ ಪೂಜೆಯನ್ನು ನಾನು ಮಾಡಿಲ್ಲ. ಸಚಿವ ಚಲುವರಾಯಸ್ವಾಮಿ ಗ್ಯಾರಂಟಿ ಯೋಜನೆ ಕೈಬಿಟ್ಟು ಅಭಿವೃದ್ಧಿಗೆ ಹಣ ಕೊಡಿ ಎಂದಿದ್ದಾರೆ. ಇನ್ನೊಂದು ತಿಂಗಳಲ್ಲಿ ಕಾಂಗ್ರೆಸ್​ನ ಶಾಸಕರೇ ಬಂಡಾಯ ಏಳುತ್ತಾರೆ. ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿವೆ. ಇನ್ನೂ ಮೂರು ತಿಂಗಳಲ್ಲಿ ಕಾಂಗ್ರೆಸ್​ನವರು ಬಂಡಾಯ ಏಳುತ್ತಾರೆ ಎಂದರು.

ಅಭಿವೃದ್ಧಿಗೆ ಹಣ ಬರುತ್ತಿಲ್ಲ ‌ಎಂದು‌ ನನ್ನ ಮುಂದೆ ಮೂವರು ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಹಿಡಿದು ಎಲ್ಲರೂ ಬೇಸರಗೊಂಡಿದ್ದಾರೆ. ಈ ಸರ್ಕಾರ ವಿಸರ್ಜನೆಗೊಂಡರೂ ಆಶ್ಚರ್ಯಪಡುವ ಹಾಗಿಲ್ಲ. ಜಿಲ್ಲೆಯ ಶಾಸಕರು ಎಷ್ಟು ಭೂಮಿ‌ಪೂಜೆ ಮಾಡಿದ್ದಾರೆ ಎಂಬುದನ್ನ ಮೊದಲು ಹೇಳಲಿ ಎಂದು ಯತ್ನಾಳ್ ಸವಾಲು ಹಾಕಿದರು.

ಮೋದಿ ಸರ್ಕಾರ ಪತನವಾಗುತ್ತೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್​ ಸಾಕಷ್ಟು ಪೆಟ್ಟು ತಿಂದಿದ್ದಾರೆ. ಐದು ವರ್ಷ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರುತ್ತಾರೆ. ಇನ್ನು, ಮೂರು ತಿಂಗಳಲ್ಲಿ ನಾವೇ(ಬಿಜೆಪಿ) 272 ಸಂಸದರೊಂದಿಗೆ ಬಹುಮತ ಮಾಡಿಕೊಳ್ಳುತ್ತೇವೆ. ಅದು ಯಾವ ರೂಪದಿಂದ ಮಾಡಿಕೊಳ್ಳುತ್ತೇವೆ ಎಂದು ಹೇಳಲು ಆಗಲ್ಲ ಎಂದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ: ನಟ ದರ್ಶನ್ ಪ್ರಕರಣದ ಕುರಿತು ಮಾತನಾಡಿದ ಯತ್ನಾಳ್​, ಇದೇನು ಹೊಸದಲ್ಲ, ಆ ವ್ಯಕ್ತಿ ಹಾಗೆ ಇದ್ದಾನೆ. ಕೆಲ ಮಂತ್ರಿಗಳು ದರ್ಶನ್ ಪರವಾಗಿ ಕರೆ ಮಾಡಿದ್ದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಸಿಎಂ ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ರಾಜ್ಯದಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪರಮೇಶ್ವರ್ ಅವರಿಗೆ ಈ ಇಲಾಖೆ ಸೂಟ್ ಆಗಲ್ಲ. ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ದಲಿತ ಸಮುದಾಯದ ಜಿ‌. ಪರಮೇಶ್ವರ್ ಅವರಿಗೆ ಗೃಹ ಖಾತೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ ಅವರು‌ ಪರಮೇಶ್ವರ್ ಅವರ ಹೆಸರು ಕೆಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಲ್ಯಾಂಡ್ ಮಾಫಿಯಾ ಹೆಚ್ಚಳ ವಿಚಾರವಾಗಿ ಮಾತನಾಡಿ, ತಿಂಗಳಿಗೊಮ್ಮೆಯಾದರೂ ನಿಮ್ಮ ಆಸ್ತಿ ನಿಮ್ಮ‌ ಹೆಸರಿನಲ್ಲಿದೆಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡುವಂತಾಗಿದೆ. ಸಿಟಿ ಸರ್ವೆಯಲ್ಲಿ ಉತಾರ ತೆಗೆಸಿ ನೋಡಿ. ಎಂ. ಬಿ‌ ಪಾಟೀಲ ಅವರು ತಮ್ಮ ಸುತ್ತಮುತ್ತ ಇರುವವರನ್ನ ದೂರ ಇಡಿ. ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಅವರೇ ನಿಮ್ಮ‌ ಹೆಸರನ್ನು ಹಾಳು ಮಾಡುತ್ತಾರೆ. ಸಬ್ ರಿಜಿಸ್ಟರ್ ವರ್ಗಾವಣೆ ಮಾಡಬೇಕಾದವರು ಜಿಲ್ಲಾ ಉಸ್ತುವಾರಿ ಸಚಿವರು. ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ. ಇನ್ನೊಬ್ಬ ಮಂತ್ರಿಯ ಭ್ರಷ್ಟಾಚಾರ ಆದಷ್ಟು ಬೇಗ ಹೊರತರುವೆ ಎಂದು ಹೊಸ ಬಾಂಬ್​ ಸಿಡಿಸಿದರು.

ವಿ. ಸೋಮಣ್ಣ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಿದ್ದಾರೆ :ವಿ. ಸೋಮಣ್ಣ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿರುವ ವಿಚಾರವಾಗಿ ಮಾತನಾಡಿ, ವಿ. ಸೋಮಣ್ಣ ಅವರು ಬಹಳ‌ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಹೋಗಿ ಚುನಾವಣಾ ಪ್ರಚಾರ ಮಾಡಿದ್ದಾರೋ ಅಲ್ಲಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಆದರೆ, ಕಳೆದ ವಿಧಾನ‌ಸಭಾ ಚುನಾವಣೆಯಲ್ಲಿ ಅವರು ಎರಡು ಕಡೆ ಚುನಾವಣೆಗೆ ನಿಂತರೂ ಎರಡೂ ಕಡೆ ಸೋತರು. ಅವರನ್ನು ಕೆಲವರು ಸೋಲಿಸಿದರು. ಆದರೆ, ಈಗ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ಸಚಿವ ಸ್ಥಾನ ನೀಡಲಾಗಿದೆ ಎಂದರು.

ಇದನ್ನೂ ಓದಿ :ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ಬೆಲೆ; ದರ ಏರಿಕೆಗೆ ಬೆಳಗಾವಿ ಮಂದಿ ಏನಂತಾರೆ? - petrol and diesel price hike

ABOUT THE AUTHOR

...view details