ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು. ಬೆಳಗಾವಿ:ನನಗೆ ಲೋಕಸಭೆ ಟಿಕೆಟ್ ಬೇಡಾ ಅಂಥ ಹತ್ತು ಸಲ ಹೇಳಿದ್ದೇನೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ಶಾಸಕನಾಗಿ ಆರಾಮವಾಗಿದ್ದೇನೆ ಎಂದು ಬಿಜೆಪಿಯ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನು ನಾನು ಪಾಲಿಸುತ್ತೇನೆ. ಖಂಡಿತವಾಗಿಯೂ ನಾವು ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚೆಗಳು ನಡೆದಿವೆ. ಇವತ್ತು ಮೀಟಿಂಗ್ ನಡೆಯಬೇಕಿತ್ತು. ಚರಂತಿಮಠ ನಮಗೆ ಉಸ್ತುವಾರಿ ಇದ್ದಾರೆ. ಮುಂದಿನ ವಾರದಲ್ಲಿ ಡೇಟ್ ಕೊಡುತ್ತಾರೆ. ಚರಂತಿಮಠ ಅವರು ಬಂದ ನಂತರ ದೆಹಲಿಯಲ್ಲಿ ಮೀಟಿಂಗ್ ಆಗುತ್ತದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದರಂತೆ ಕೆಲಸ ಮಾಡುತ್ತೇವೆ ಎಂದರು.
ಈ ಭಾಗದಲ್ಲಿ ಮೂರು ಜನ ಶಾಸಕರಿದ್ದೇವೆ. ರಮೇಶ ಜಾರಕಿಹೊಳಿ, ಅಭಯ ಪಾಟೀಲ ಮತ್ತು ನಾನಿದ್ದೇನೆ. ಮಾಜಿ ಶಾಸಕರೂ ಇದ್ದಾರೆ. ಚರಂತಿಮಠ ಅನುಭವಸ್ಥರಿದ್ದು, ಅವರ ನೇತೃತ್ವದಲ್ಲಿ ಸಭೆ ಮಾಡಿ ಮುಂದಿನ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಯಾರೇ ಬಿಜೆಪಿಗೆ ಬಂದರೂ ಸ್ವಾಗತ:ಲಕ್ಷ್ಮಣ ಸವದಿ ಬಿಜೆಪಿಗೆ ಬರುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ನಾನು ಕೂಡಾ ಟಿವಿ ಮಾಧ್ಯಮದಲ್ಲಿ ನೋಡಿದ್ದೇನೆ. ನಮ್ಮ ಜೊತೆ ಯಾರೂ ಮಾತನಾಡಿಲ್ಲ. ಏನೇ ಇದ್ದರೂ ಹೈಕಮಾಂಡನಲ್ಲಿರುತ್ತದೆ. ಯಾರೇ ಬಿಜೆಪಿಗೆ ಬಂದರೂ ಸ್ವಾಗತಿಸುತ್ತೇವೆ. ತಡ ಮಾಡಬೇಡಿ. ಬೇಗನೆ ಬರ್ರಿ ಅಂತಾ ಹೇಳುತ್ತೇವೆ ಅಷ್ಟೇ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ:ಲೋಕಸಭೆ ಮುಂದೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದಕ್ಕೆ ಫೆ. 7ರಂದು ಪ್ಯಾಲೆಸ್ ಗ್ರೌಂಡ್ನಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ. ಸಮಸ್ಯೆಗಳನ್ನು ಬೇರೆ ಕಡೆಗೆ ತಿರುಚುವ ಕೆಲಸ ಮಾಡುತ್ತಿದ್ದಾರೆ. ಅಂಕಿಅಂಶಗಳ ಸಮೇತ ಚರ್ಚೆಗೆ ಬರಲಿ. ಡಿ.ಕೆ.ಸುರೇಶ್ ಹೇಳಿಕೆ ಕೊಟ್ಟಿದ್ದು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದನ್ನು ಡೈವರ್ಟ್ ಮಾಡಲು ದೆಹಲಿಗೆ ಹೋಗುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ಜಗದೀಶ ಶೆಟ್ಟರ್ ಏನೋ ಬೇಜಾರಾಗಿ ಹೋಗಿದ್ದರು. ಹಿರಿಯ ನಾಯಕರು ಈಗ ಮತ್ತೆ ವಾಪಸ್ ಬಂದಿದ್ದು ಸಂತೋಷ. ನಮ್ಮ ಕಾರ್ಯಕರ್ತರು, ನಮ್ಮ ಜನ ಬೆಳಗಾವಿ, ಚಿಕ್ಕೋಡಿ ಗೆಲ್ಲಿಸುವ ಕೆಲಸ ಮಾಡುತ್ತಾರೆ. ಜನ ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಬೇಸತ್ತು ಹೋಗಿದ್ದು, ನಮ್ಮ ಕಡೆ ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ, ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆದರೆ ನಾವು 130 ಸೀಟು ಕ್ರಾಸ್ ಮಾಡುತ್ತೇವೆ. ಕಾಂಗ್ರೆಸ್ ಶಾಸಕರಿಗೆ ಸಮಸ್ಯೆಗಳನ್ನು ಎದುರಿಸಲು ಆಗುತ್ತಿಲ್ಲ. ಅನುದಾನ ಬರುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕಿಡಿಕಾರಿದರು.
ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆಗಳ ಅಭಿವೃದ್ದಿಗಾಗಿ ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಪ್ರತಿಭಟನೆ ಮಾಡುವುದನ್ನು ಬಿಟ್ಟು ಕೇಂದ್ರದ ಹತ್ತಿರ ಹೋಗಿ ಅನುದಾನ ಕೇಳಿದರೆ ಕೊಟ್ಟೇ ಕೊಡ್ತಾರೆ. ಪ್ರತಿಭಟನೆ ಮಾಡುತ್ತಾ ಹೋದರೆ ಹೇಗೆ ಎಂದು ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದರು.
ಇದನ್ನೂಓದಿ:ತನ್ನ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದಿಂದ ಪ್ರತಿಭಟನೆಯ ರಾಜಕೀಯ ಸ್ಟಂಟ್: ಬೊಮ್ಮಾಯಿ