ಕೊಪ್ಪಳ : ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಮಹಾ ದಾಸೋಹ ಜರುಗುತ್ತಿದೆ. ದಾಸೋಹದಲ್ಲಿಂದು ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿಯನ್ನ ಭಕ್ತರು ಸವಿಯಲಿದ್ದಾರೆ.
ಭಕ್ತರಿಗೆ 10 ಲಕ್ಷಕೂ ಹೆಚ್ಚು ಮಿರ್ಚಿ ರುಚಿ: ಕಳೆದ 9 ವರ್ಷಗಳಿಂದ ಕೊಪ್ಪಳದ ಗೆಳಯರ ಬಳಗ ಮಹಾದಾಸೋಹದಲ್ಲಿ ಮಿರ್ಚಿ ಸೇವೆ ಮಾಡುತ್ತಿದೆ. ಈ ವರ್ಷ ಒಟ್ಟು 10 ಲಕ್ಷಕ್ಕೂ ಹೆಚ್ಚು ಮಿರ್ಚಿ ತಯಾರಿಸುವ ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ತಿಂಗಳ ಹಿಂದಿನಿಂದಲೇ ತಯಾರಿ ನಡೆಸಿದ್ದು, ಮಿರ್ಚಿ ತಯಾರಿಕೆಗಾಗಿ 25 ಕ್ವಿಂಟಾಲ್ ಕಡ್ಲೆಹಿಟ್ಟು, 22 ಕ್ವಿಂಟಾಲ್ ಹಸಿಮೆಣಸಿನಕಾಯಿ, 200 ಕೆಜಿಯ 20 ಬ್ಯಾರಲ್ ಒಳ್ಳೆಣ್ಣೆ, 50 ಕೆಜಿ ಅಜಿವಾನ, 50 ಕೆಜಿ ಸೋಡಾಪುಡಿ, 60 ಅಡುಗೆ ತಯಾರಿ ಸಿಲಿಂಡರ್ ಬಳಸಲಾಗುತ್ತಿದೆ. ಒಟ್ಟು 18 ಗ್ರಾಮದಿಂದ 300 ಸ್ವಯಂಸೇವಕರು ಮಿರ್ಚಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಎರಡನೇ ದಿನದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರು ಮಹಾ ಪ್ರಸಾದದಲ್ಲಿ ಮಿರ್ಚಿ ರುಚಿ ಸವಿಯಲಿದ್ದಾರೆ.
ಈ ಕುರಿತು ಭಕ್ತ ಚಂದ್ರಶೇಖರ್ ರೆಡ್ಡಿಯವರು ಮಾತನಾಡಿ, ''ಈ ಭಾಗದಲ್ಲಿ ರುಚಿಕರವಾದ ಖಾದ್ಯ ಎಂದರೆ ಮಿರ್ಚಿ. ಗೆಳೆಯರ ಬಳಗದಿಂದ ಸುಮಾರು ಏಳೆಂಟು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ಈ ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ನಾವು ಮಿರ್ಚಿಯನ್ನ ಕೊಡುತ್ತೇವೆ. ಇದಕ್ಕಾಗಿ ನಾವು ಒಂದರಿಂದ ಒಂದೂವರೆ ತಿಂಗಳಿನಿಂದ ತಯಾರಿ ಮಾಡುತ್ತಾ ಬಂದಿದ್ದೇವೆ''ಎಂದರು.
ಈ ಬಗ್ಗೆ ಸ್ವಯಂಸೇವಕರಾದ ಗಿರಿಜಾ ಎಂಬುವವರು ಮಾತನಾಡಿ, ''ಕಳೆದ ಐದು ವರ್ಷದಿಂದ ನಾವು ಇಲ್ಲಿಗೆ ಬರುತ್ತಿದ್ದೇವೆ. ದೇವರಿಗೆ ಸೇವೆ ಸಲ್ಲಿಸುವುದರಿಂದ ಅನುಗ್ರಹ ಸಿಗುತ್ತೆ, ಒಳ್ಳೆಯ ವಿದ್ಯೆ, ಬುದ್ದಿ ಬರುತ್ತೆ. ನೆಮ್ಮದಿ ಬರುತ್ತೆ. ನಮ್ಮ ಮಕ್ಕಳಿಗೆ ಬೇಕಾದ ನೌಕರಿ ಸಿಗುತ್ತೆ. ಹೀಗಾಗಿ, ನಾವು ತೃಪ್ತಿಯಾಗಿ ಸೇವೆ ಮಾಡುತ್ತಿದ್ದೇವೆ'' ಎಂದು ಹೇಳಿದರು.
ಇದನ್ನೂ ಓದಿ : 8 ಲಕ್ಷ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ - KOPPAL JATRE 2025
ಮಹಾರಥೋತ್ಸವಕ್ಕೆ ಬುಧವಾರ ಚಾಲನೆ: ಕೊಪ್ಪಳ ಗವಿಸಿದ್ದೇಶ್ವರರ ಮಹಾರಥೋತ್ಸವ 8 ಲಕ್ಷ ಜನ ಭಕ್ತ ಸಾಗರದ ಮಧ್ಯೆ ಬುಧವಾರ ಸಂಜೆ ಪುಷ್ಯ ಮಾಸದ ಬಹುಳ ಬಿದಿಗೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಹಿಂದೂಸ್ಥಾನಿ ಸಂಗೀತದ ಮೇರು ಪರ್ವತ ಪಂಡಿತ, ಪದ್ಮಶ್ರೀ ಪುರಸ್ಕೃತ ಎಂ.ವೆಂಕಟೇಶ್ ಕುಮಾರ್ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.