ಮೈಸೂರು : ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಇಂದು ಭೇಟಿ ನೀಡಿದ್ದರು. ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಯಾಗಿತ್ತು. ಈ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ಅವರು, 'ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಶಾಂತಿ ಸಭೆ ನಡೆಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು. ಇದು ಯಾವ ರೀತಿ ಆಯಿತು ಎಂಬುದನ್ನು ತಿಳಿಯುವುದಕ್ಕೆ ನಾನು ಡಿವೈಎಸ್ಪಿ ಅವರೊಂದಿಗೆ ಮಾತನಾಡಿ ನಂತರ ಎಸ್ಪಿ ಮೇಡಂ ಅವರೊಂದಿಗೂ ಇದನ್ನ ಹೇಗೆ ಬಗೆಹರಿಸಬಹುದು ಎಂದು ಚರ್ಚಿಸಿದ್ದೇನೆ. ಇದನ್ನು ಶಾಂತಿಯುತವಾಗಿ ಬಗೆಹರಿಸೋಣ ಎಂದು ಹೇಳಿದ್ದೇನೆ' ಎಂದರು.
ಖಂಡಿತವಾಗಿಯೂ ನಾಳೆ ದಿವಸ ಯಾವುದೇ ಕ್ಷೇತ್ರದಲ್ಲಿಯೂ ಈ ರೀತಿಯ ಘಟನೆ ನಡೆಯಬಾರದು. ಇದು ಬೂದಿ ಮುಚ್ಚಿದ ಕೆಂಡದಂತೆ ಬೆಳೆದುಕೊಂಡು ಹೋಗುತ್ತಿರುತ್ತದೆ. ಎರಡು ಸಮುದಾಯದವರು ಸೌಹಾರ್ದತೆಯಿಂದ ಬಾಳಬೇಕು. ಆದಷ್ಟು ಬೇಗ ಇದನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಿ ಇದಕ್ಕೆ ತೆರೆ ಎಳೆಯಲಾಗುವುದು ಎಂದು ಶಾಸಕರು ತಿಳಿಸಿದರು.
ಜನತೆಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇವೆ:ಈ ಬಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಮಾತನಾಡಿ, ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಜನತೆಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇವೆ. ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಭದ್ರಗೊಳಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ರೀತಿ ಯಾವುದೇ ಘಟನೆ ಆಗದಂತೆ ನಾವೆಲ್ಲರೂ ಕೂಡಾ ಶಾಂತಿಯುತವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ :ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣ: ನಾಲ್ವರ ಬಂಧನ.. ದುಷ್ಕರ್ಮಿಗಳ ವಿರುದ್ಧ ಖರ್ಗೆ ಆಕ್ರೋಶ