ಹುಬ್ಬಳ್ಳಿ:"ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗ, ವೈಯಕ್ತಿಕ ಆದಾಯ ತೆರಿಗೆ, ಮಹಿಳಾ ಉದ್ಯಮಿಗಳು ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದು, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಪ್ರಸಕ್ತ ಬಜೆಟ್ ಸ್ವಾಗತಾರ್ಹವಾಗಿದೆ" ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗೇರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಂತರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಎಲ್ಲ ರಂಗಗಳನ್ನು ಪರಿಗಣಿಸಿ ಬಜೆಟ್ ಮಂಡನೆ ಮಾಡಲಾಗಿದೆ. ಆದಾಯ ತೆರಿಗೆ ವಿನಾಯಿತಿಯನ್ನು 10 ಲಕ್ಷಕ್ಕೆ ಸ್ಲ್ಯಾಬ್ ಮಾಡಬೇಕು ಎಂದು ಮನವಿ ಮಾಡಿದ್ದೆವು. ಆದ್ರೆ ಅವರು 12 ಲಕ್ಷದವರೆಗೂ ಕೊಟ್ಟಿದ್ದಾರೆ. ಎಂಎಸ್ಎಂಇ ಅವರಿಗೆ ಕ್ರೆಡಿಟ್ ಗ್ಯಾರಂಟಿಯನ್ನು 5 ಕೋಟಿಯಿಂದ 10 ಕೋಟಿವರೆಗೆ ಏರಿಕೆ ಮಾಡಿದ್ದಾರೆ. ಯುವ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚಳ, ಉಡಾನ-2, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಇದೊಂದು ಅತ್ಯುತ್ತಮ ಬಜೆಟ್ ಆಗಿದೆ" ಎಂದರು.
ಕರ್ನಾಟಕದ ವಾಣಿಜ್ಯೋದ್ಯಮ ಸಂಸ್ಥೆ ಸಹ ಕಾರ್ಯದರ್ಶಿ ಮಹೇಂದ್ರ ಸಿಂಘಿ ಪ್ರತಿಕ್ರಿಯಿಸಿ, "ನಿರ್ಮಲಾ ಸೀತಾರಾಮನ್ ಅವರು ಬ್ಯಾಲೆನ್ಸ್ ಬಜೆಟ್ ಕೊಡುವ ಪ್ರಯತ್ನ ಮಾಡಿದ್ದಾರೆ. 12 ಲಕ್ಷದವರೆಗೆ ಟ್ಯಾಕ್ಸ್ ವಿನಾಯಿತಿ ಕೊಟ್ಟಿದ್ದು ಸ್ವಾಗತಾರ್ಹವಾಗಿದೆ. ಬಜೆಟ್ನಲ್ಲಿ ರೈಲ್ವೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಎಲ್ಲೋ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಾರೆ ಎಂಬ ಆತಂಕ ಕಾಡುತ್ತಿದೆ. ಜೀವನಾವಶ್ಯಕವಾದ 36 ಔಷಧಿಗಳ ಮೇಲಿನ ತೆರಿಗೆ ವಿನಾಯಿತಿ ಕೊಟ್ಟಿದ್ದು ಕೂಡ ಸ್ವಾಗತಾರ್ಹವಾಗಿದೆ. ಇದು ಬಡ ರೋಗಿಗಳ ಪಾಲಿಗೆ ಕ್ರಾಂತಿಕಾರ ಹೆಜ್ಜೆಯಾಗಿದೆ. ಬಜೆಟ್ನಲ್ಲಿ ಬಿಹಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. "ಸಬ್ ಕಾ ಸಾಥ್, ಸಬ್ ಕಾ ಟ್ಯಾಕ್ಸ್ ಬಿಹಾರ ಕಾ ವಿಕಾಸ" ಮಾಡಿದ್ದು, ಕೊಂಚ ನೋವಾಗಿದೆ. ಬಜೆಟ್ನಲ್ಲಿ ಕರ್ನಾಟಕದ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಇದರ ಬಗ್ಗೆ ಅಸಮಾಧಾನವಿದ್ದು, ಇದೊಂದು ಉತ್ತಮ ಬಜೆಟ್" ಎಂದರು.