ಬಳ್ಳಾರಿ :ಮೂಲತಃ ಬಳ್ಳಾರಿ ತಾಲೂಕಿನ ಕುರುವಳ್ಳಿಯವರಾದ ಮಹಿಳೆ ಕಳೆದ ಸುಮಾರು 20 ವರ್ಷಗಳಿಂದ ಕುಟುಂಬದ ಸಂಪರ್ಕಕಕ್ಕೆ ಸಿಗದೆ ಕಾಣೆಯಾಗಿದ್ದರು.ಅಂದು ಹೊಸಪೇಟೆಯ ದನನಾಯಕನಕೆರೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ಸೇರಿ 50 ವರ್ಷ ವಯಸ್ಸಿನ ಸಾಕಮ್ಮ ಅನಾಥರಾಗಿದ್ದರು. ಇದೀಗ ಅವರನ್ನ ಮರಳಿ ರಾಜ್ಯಕ್ಕೆ ಕರೆತರಲು ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಮಂಡಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಬಿ. ಎಂ ಅವರು ಸಾಕಮ್ಮ ಅವರನ್ನು ಮಾತನಾಡಿಸಿ, ವಿಡಿಯೋ ಮಾಡಿ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತ ವಿಜಯ್‌ಕುಮಾರ್ ಎಂಬುವರಿಗೆ ಕಳುಹಿಸಿದ್ದರು. ಅದನ್ನು ವಿಜಯ್‌ಕುಮಾರ್ ಗುರುವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದರು.
ಪೋಸ್ಟ್ ನೋಡಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಸಾಕಮ್ಮ ಅವರನ್ನು ಕರೆತರುವ ಸಂಬಂಧ ಮಂಡಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿನಂದನ್ ಅವರೊಂದಿಗೂ ಗುರುವಾರ ಚರ್ಚಿಸಿದರು. ನಂತರ ಈ ಕಾರ್ಯವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, 'ಮಂಡಿಯ ನಿರಾಶ್ರಿತರ ಕೇಂದ್ರದಲ್ಲಿ ಇರುವ ಸಾಕಮ್ಮ ಅವರನ್ನು ಕರೆತರಲು ಸಮಾಜ ಕಲ್ಯಾಣ ಇಲಾಖೆಯಿಂದ ಮೂರು ಜನರ ತಂಡ ಈಗಾಗಲೇ ಹೋಗಿದೆ. ನಾಳೆ ಸಂಜೆ ಚಂಡೀಗಡದಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಾರೆ. ನಂತರ ಬಳ್ಳಾರಿಗೆ ಕರೆತರುತ್ತೇವೆ. ಈಗಾಗಲೇ ನಮ್ಮ ತಂಡದವರು ಅಲ್ಲಿನ ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ಎಸ್ಪಿ ಕೂಡಾ ಅವರ ಮಕ್ಕಳನ್ನು ಮಾತನಾಡಿಸಿದ್ದಾರೆ' ಎಂದರು.