ಬೆಂಗಳೂರು: ಮಕ್ಕಳ ಸಮೇತ ದಂಪತಿ ತೆರಳುತ್ತಿದ್ದ ಕಾರು ಅಡ್ಡಗಟ್ಟಿದ ಪುಂಡರು ದಾಳಿ ಮಾಡಿದ ಪರಿಣಾಮ ಕಾರಿನಲ್ಲಿದ್ದ ಬಾಲಕ ಗಾಯಗೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ (ಅ.30) ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಕಸವನಹಳ್ಳಿ ಅಮೃತ ಕಾಲೇಜು ಬಳಿ ಇಬ್ಬರು ಬೈಕ್ನಲ್ಲಿ ಬಂದ ಪುಂಡರು ಹಲ್ಲೆ ನಡೆಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ಕುಟುಂಬವನ್ನು ಬೈಕ್ನಲ್ಲಿ ಹಿಂಬಾಲಿಸಿದ್ದರು. ಇಬ್ಬರು ಮಕ್ಕಳೊಂದಿಗಿದ್ದ ಅನೂಪ್ ದಂಪತಿಯ ಕಾರನ್ನು ಅಮೃತ ಕಾಲೇಜು ಬಳಿ ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಕಾರಿನ ಗಾಜು ಇಳಿಸುವಂತೆ ಹೆದರಿಸಿದ್ದರಿಂದ ಆತಂಕಗೊಂಡ ಅನೂಪ್ ಅವರು ಗಾಜು ತೆರೆಯದೆ ಕಾರು ಓಡಿಸಿದ್ದಾರೆ. ಆಕ್ರೋಶಗೊಂಡ ಆರೋಪಿಗಳು, ಕಲ್ಲಿನಿಂದ ಕಾರಿನ ಹಿಂಭಾಗದ ಗಾಜಿಗೆ ಹೊಡೆದಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳ ಪೈಕಿ ಐದು ವರ್ಷದ ಮಗುವಿನ ತಲೆಗೆ ಗಂಭೀರ ಗಾಯವಾಗಿದೆ. ಇದನ್ನು ಕಂಡು ಅನೂಪ್ ಪತ್ನಿ ಚೀರಾಡುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.