ಕರ್ನಾಟಕ

karnataka

ETV Bharat / state

ರಾಜ್ಯದ ಶಕ್ತಿ ಯೋಜನೆ ಅಧ್ಯಯನಕ್ಕಾಗಿ ನಾಳೆ ಬೆಂಗಳೂರಿಗೆ ಆಗಮಿಸಲಿದೆ ಆಂಧ್ರ ಸಚಿವರ ನೇತೃತ್ವದ ನಿಯೋಗ - STUDY ON SHAKTI SCHEME

ಭಾರಿ ಜನಪ್ರಿಯತೆ ಪಡೆದುಕೊಂಡಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಅಧ್ಯಯನಕ್ಕೆಂದೇ ಪಕ್ಕದ ಆಂಧ್ರ ಪ್ರದೇಶ ಸರ್ಕಾರದ ಸಚಿವರ ನಿಯೋಗ ರಾಜ್ಯಕ್ಕೆ ಆಗಮಿಸಲಿದೆ.

KARNATAKA SHAKTI SCHEME
'ಶಕ್ತಿ' ಯೋಜನೆಗೆ ಚಾಲನೆ ನೀಡಿದ ಕ್ಷಣ (IANS)

By ETV Bharat Karnataka Team

Published : Jan 1, 2025, 7:07 AM IST

ಬೆಂಗಳೂರು:ರಾಜ್ಯದಲ್ಲಿ ಜನಪ್ರಿಯವಾಗಿರುವ ಶಕ್ತಿ ಯೋಜನೆಯನ್ನು ಆಂಧ್ರ ಪ್ರದೇಶ ಸರ್ಕಾರವು ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಶಕ್ತಿ ಯೋಜನೆ ಅಧ್ಯಯನಕ್ಕಾಗಿ ಆಂಧ್ರದ ಸಚಿವರ ಹಾಗೂ ಅಧಿಕಾರಿಗಳ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದೆ.

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜನ‌ಮೆಚ್ಚುಗೆ ಗಳಿಸಿದೆ. ಕಳೆದ ಎರಡು ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಕಾಂಗ್ರೆಸ್ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜನಪ್ರಿಯ ಗಳಿಸಿರುವ ಯೋಜನೆಯಾಗಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ರಾಜ್ಯದ ಶಕ್ತಿ ಯೋಜನೆಯತ್ತ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಚಿತ್ತ ನೆಟ್ಟಿದೆ.

ಆಂಧ್ರಪ್ರದೇಶ ಸರ್ಕಾರ ಅಲ್ಲಿ ಕರ್ನಾಟಕ ಮಾದರಿಯಲ್ಲೇ ಶಕ್ತಿ ಯೋಜನೆಯನ್ನು ಜಾರಿ ಮಾಡಲು ಒಲವು ಹೊಂದಿದೆ. ಈ ನಿಟ್ಟಿನಲ್ಲಿ ಆಂಧ್ರದ ಸಚಿವರು ಹಾಗೂ ಅಧಿಕಾರಿಗಳ ನಿಯೋಗ ನಾಳೆ (ಜ.2ಕ್ಕೆ) ರಾಜ್ಯಕ್ಕೆ ಭೇಟಿ ನೀಡಲಿದೆ. ಬೆಂಗಳೂರಿಗೆ ಆಗಮಿಸಿ ಶಕ್ತಿ ಯೋಜನೆ ಬಗ್ಗೆ ಅಧ್ಯಯನ ನಡೆಸಲಿದೆ. ರಾಜ್ಯದ ಶಕ್ತಿ ಯೋಜನೆ ಅನುಷ್ಠಾನ, ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಸಚಿವರು ಸೇರಿ 15 ಸದಸ್ಯರ ತಂಡ ಭೇಟಿ:ರಾಜ್ಯಕ್ಕೆ ಆಂಧ್ರ ಪ್ರದೇಶದ ಮೂವರು ಸಚಿವರು ಸೇರಿ ಹಿರಿಯ ಅಧಿಕಾರಿಗಳ ಸುಮಾರು 15 ಸದಸ್ಯರ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದೆ. ಜ.3ರಂದು ಸಿಎಂ, ಸಾರಿಗೆ ಸಚಿವ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಭೇಟಿಯಾಗಿ ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ನಿಯೋಗದಲ್ಲಿ ಆಂಧ್ರದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ಶೆಟ್ಟಿ, ಗೃಹ ಮತ್ತು ವಿಪತ್ತು ನಿರ್ವಹಣೆ ಸಚಿವೆ ವಂಗಲಪುಡಿ ಅನಿತಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಟ್ಟಿ ಸಂಧ್ಯಾರಾಣಿ ಇರಲಿದ್ದಾರೆ. ಇದರ ಜೊತೆಗೆ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಎಪಿಎಸ್​ಆರ್​ಟಿಸಿಯ ಅಧಿಕಾರಿಗಳನ್ನೊಳಗೊಂಡ 15 ಅಧಿಕಾರಿಗಳ ತಂಡ ಆಗಮಿಸಿ ಶಕ್ತಿ ಯೋಜನೆಯ ಅಧ್ಯಯನ ನಡೆಸಲಿದೆ.

ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆಂಧ್ರ ಪ್ರದೇಶ ಸರ್ಕಾರದ ಸಚಿವರ ನೇತೃತ್ವದ ನಿಯೋಗ ಜ.3ಕ್ಕೆ ಭೇಟಿಯಾಗಲಿದ್ದಾರೆ. ಭೇಟಿ ವೇಳೆ ಶಕ್ತಿ ಯೋಜನೆ ಅನುಷ್ಠಾನ, ಹಣಕಾಸು ನಿರ್ವಹಣೆ, ಹೊರೆ, ನಿರ್ವಹಣೆ, ಮಾನದಂಡಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಶಕ್ತಿ ಯೋಜನೆಯ ಯಶಸ್ಸು, ರಸ್ತೆ ಸಾರಿಗೆ ನಿಗಮ ತೆಗೆದುಕೊಂಡ ಕ್ರಮಗಳ ಬಗ್ಗೆ ನಿಯೋಗಕ್ಕೆ ವಿವರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶಕ್ತಿ ಯೋಜನೆಯಡಿ ರಸ್ತೆ ಸಾರಿಗೆ ನಿಗಮಗಳಿಗೆ ₹6,543 ಕೋಟಿ ಬಿಡುಗಡೆ - SHAKTI SCHEME GRANT

ABOUT THE AUTHOR

...view details