ಕರ್ನಾಟಕ

karnataka

ETV Bharat / state

ಯಾರ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ: ಜೋಶಿಗೆ ಜಮೀರ್ ತಿರುಗೇಟು

ನಾನು ಹೇಳಿದ ತಕ್ಷಣ, ಸೂಚನೆ ಕೊಟ್ಟಾಕ್ಷಣ ಅಧಿಕಾರಿಗಳು ನಿಮ್ಮ ಆಸ್ತಿಯನ್ನು ವಕ್ಫ್​ ಹೆಸರಲ್ಲಿ ಮಾಡಲು ಸಾಧ್ಯವಾ? ಅದಕ್ಕೆ ಎಂದು ಕಾನೂನು ಇಲ್ಲವಾ ಎಂದು ಸಚಿವ ಜಮೀರ್ ಅಹ್ಮದ್ ‌ಅವರು ವಕ್ಫ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ‌
ಸಚಿವ ಜಮೀರ್ ಅಹ್ಮದ್ ‌ (ETV Bharat)

By ETV Bharat Karnataka Team

Published : Oct 30, 2024, 1:34 PM IST

ಹುಬ್ಬಳ್ಳಿ: "ನಾನು ಒಬ್ಬ ಹಿಂದೂಸ್ತಾನಿ. ಆ್ಯಮ್​ ಆ್ಯನ್​ ಇಂಡಿಯನ್​. ನನ್ನನ್ನು ಹೇಗೆ ಕಿತ್ತುಹಾಕುತ್ತಾರೆ. ಜೋಶಿ ಅವರಿಗೆ ಬರೀ ಮುಸಲ್ಮಾನರು ಬಿಟ್ಟು ಬೇರೆ ಏನು ಮಾತನಾಡಲು ವಿಚಾರವಿಲ್ಲ. ಮಾತನಾಡಿದರೆ ಹಿಂದೂ-ಮುಸಲ್ಮಾನ ಬಗ್ಗೆ ಮಾತ್ರ" ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಮಾಡಿರುವ ಆರೋಪಕ್ಕೆ ಸಚಿವ ಜಮೀರ್ ಅಹ್ಮದ್ ‌ಖಾನ್ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು, "ಸಚಿವ ಜಮೀರ್ ಅಹ್ಮದ್ ‌ಖಾನ್ ಇಡೀ ಭಾರತ ಮತ್ತು ಕರ್ನಾಟಕ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಹೀಗಾಗಿ ಅವರನ್ನು ಕಾಂಗ್ರೆಸ್​ ಪಕ್ಷ ಸಚಿವ ಸಂಪುಟದಿಂದ ಕಿತ್ತುಹಾಕಬೇಕು" ಎಂದು ಹೇಳಿಕೆ ನೀಡಿದ್ದರು. ಈ ಆರೋಪಕ್ಕೆ ಇಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ‌ಖಾನ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ಹೇಳಿಕೆ (ETV Bharat)

ಲ್ಯಾಂಡ್​ ಜಿಹಾದ್ ಆರೋಪ: "ರಾಜ್ಯದಲ್ಲಿಉಪಚುನಾವಣೆ, ಮಹಾರಾಷ್ಟ್ರ ಚುನಾವಣೆ ಇದೆ. ಈ ಹಿನ್ನೆಲೆ ಬೇಕಂತಲೇ ಬಿಜೆಪಿಯವರು ವಕ್ಫ್​​ ವಿಚಾರ ಎತ್ತಿದ್ದಾರೆ. ಇದು ನನ್ನ ಕಾಲದಲ್ಲಿ ನಡಿಯುತ್ತಿಲ್ಲಾ. 2008ರಿಂದ 2013ರ ವರೆಗೆ ಬಿಜೆಪಿ ಸರ್ಕಾರವಿತ್ತು. ಆಗ ಅವರು ಎಷ್ಟು ನೋಟಿಸ್​ ಕೊಟ್ಟಿದ್ದಾರೆ ಎಲ್ಲ ಮಾಹಿತಿ ನಾನು ಕೊಡುತ್ತೇನೆ" ಎಂದರು.

"ಯಾರ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಅನ್ನದಾತರ ಆಸ್ತಿಯನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ. ಕಾನೂನು ಇದೆ ಅಲ್ಲವಾ. ಯಾರದೋ ಆಸ್ತಿಯನ್ನು ಇನ್ನಾರೋ ತೆಗೆದುಕೊಳ್ಳಲು ಸಾಧ್ಯವಾ? ನಾನು ಸರ್ಕಾರದಲ್ಲಿ ಮಂತ್ರಿ ಆಗಿದ್ದಿರಬಹುದು. ಹಾಗಂತ ನಾನು ಹೇಳಿದ ತಕ್ಷಣ, ಸೂಚನೆ ಕೊಟ್ಟಾಕ್ಷಣ ಅಧಿಕಾರಿಗಳು ನಿಮ್ಮ ಆಸ್ತಿಯನ್ನು ವಕ್ಫ್​ ಹೆಸರಲ್ಲಿ ಮಾಡಲು ಸಾಧ್ಯವಾ? ಅದಕ್ಕೆ ಎಂದು ಕಾನೂನು ಇಲ್ಲವಾ?" ಎಂದು ಸಚಿವ ಜಮೀರ್​ ಪ್ರಶ್ನಿಸಿದರು.

"ನಮ್ಮದು ಅತಿಕ್ರಮಣ ಆಗಿರುವುದು. ಅತಿಕ್ರಮಣ ಯಾವುದು ಆಗಿದೆ ಆ ಆಸ್ತಿಯನ್ನಾದರೂ ಉಳಿಸುಕೊಳ್ಳುವ ಹಿನ್ನೆಲೆಯಲ್ಲಿ ವಕ್ಫ್​ ಅದಾಲತ್​ ಮಾಡಿಕೊಂಡಿದ್ದೇವೆ. ಮುಜರಾಯಿದಲ್ಲಿ 38 ಸಾವಿರ ಎಕರೆಗಳಷ್ಟು ಭೂಮಿ ಇದೆ. ಅದರಲ್ಲಿ 780 ಎಕರೆ ಆಸ್ತಿ ಅತಿಕ್ರಮಣವಾಗಿದೆ. ಮುಜರಾಯಿ ಎಂದರೇನು ದೇವರ ಆಸ್ತಿ. ವಕ್ಫ್​ ಇಲಾಖೆಗೆ ದಾನಿಗಳು ದಾನ ಮಾಡಿರುವುದು. ವಕ್ಫ್​ಗೆ ಸರ್ಕಾರ ಕೊಟ್ಟಿರುವ ಆಸ್ತಿಗಳು ಎಂದು ಬಹಳ ಜನರಿಗೆ ಸಂದೇಹವಿದೆ. ಆದರೆ ಒಂದು ಇಂಚು ಜಾಗ ಕೂಡ ನಾವು ವಕ್ಫ್​ಗೆ ಸರ್ಕಾರದಿಂದ ತೆಗೆದುಕೊಂಡಿಲ್ಲ. 1 ಲಕ್ಷದ 12 ಸಾವಿರ ಎಕರೆಯಲ್ಲಿ ನಮ್ಮ ವಕ್ಫ್ ಕೈಯಲ್ಲಿ 23 ಸಾವಿರ ಎಕರೆ ಇದೆ. ಮಿಕ್ಕ 84 ಸಾವಿರ ಅತಿಕ್ರಮಣವಾಗಿದೆ. ಯಾರ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಜಮೀರ್ ವಿವರಿಸಿದರು.

ರೈತರಿಗೆ ಜಮೀರ್​ ಅಭಯ: "ನಾನು ಮಾಧ್ಯಮದ ಮುಖಾಂತರ ರೈತರಿಗೆ ವಕ್ಫ್ ಅಧ್ಯಕ್ಷನಾಗಿ ಆಶ್ವಾಸನೆ ನೀಡುತ್ತಿದ್ದೇನೆ. ಯಾವ ರೈತನಿಗೂ ತೊಂದರೆಯಾಗಲ್ಲ. ಇಲ್ಲಿ ಎತ್ತಿಕಟ್ಟಿ ರಾಜಕೀಯ ಮಾಡಲಾಗುತ್ತಿದೆ" ಎಂದು ದೂರಿದರು.

ಬಿಜೆಪಿಯವರು ಎಲ್ಲಿಗಾದರೂ ಹೋಗಲಿ, ಸಂತೋಷ:ಬಿಜೆಪಿ ಅವರು ಬಿಜಾಪುರಕ್ಕೆ ಹೋಗುತ್ತಿದ್ದಾರೆ ಎಂದು ತಿಳಿಸಿದಾಗ, "ಅವರು ಎಲ್ಲಿಗಾದರೂ ಹೋಗಲಿ, ಸಂತೋಷ. ನಿನ್ನೆ ಸಚಿವ ಎಂ​. ಬಿ. ಪಾಟೀಲ್ ಅವರು ಹೇಳಿದ್ದಾರೆ, ಬಿಜಾಪುರಕ್ಕೆ ಕಮಿಟಿ ಮಾಡಿ ಬಿಜೆಪಿ ಅವರು ಹೋಗುತ್ತಿದ್ದಾರೆ. ನಾನು ಅಲ್ಲಿನ ಡಿಸಿ ಅವರಿಗೆ ಬಿಜೆಪಿ ಅವರನ್ನು ಸ್ವಾಗತಿಸಿ, ಟೀ-ಕಾಫಿ ಕೊಡಿ, ಕೇಳಿದ ಎಲ್ಲಾ ದಾಖಲೆಯನ್ನು ಕೊಡಿ ಎಂದು ಹೇಳಿದ್ದೇನೆ ಎಂದರು.

ಜಾತಿ ನಿಮ್ಮ ಮನೇಲಿ ಮಾಡಿ: "ಭಾರತದಲ್ಲಿ ಇರುವವರೆಲ್ಲಾ ಭಾರತೀಯರು ಅಷ್ಟೇ. ಜೋಶಿ ಅವರೇ ರಾಜಕೀಯಕ್ಕೆ ಬಂದ ಮೇಲೆ ಜಾತಿ ಮಾಡಬಾರದು. ಮಾಡೋವುದಿದ್ದರೆ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಎಂದು ಜಮೀರ್​ ಟಾಂಗ್​ ನೀಡಿದರು.

ಇದನ್ನೂ ಓದಿ:"ಬೇಲಿನೇ ಎದ್ದು ಹೊಲ ಮೇಯ್ದಂತೆ": ವಕ್ಫ್ ಬೋರ್ಡ್​ಗೆ ಜಮೀರ್​ ಅಹಮದ್ ಕುಮ್ಮಕ್ಕು - ಬಿ.ವೈ. ವಿಜಯೇಂದ್ರ

ABOUT THE AUTHOR

...view details