ಹಾವೇರಿ :ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮಕ್ಕೆ ಕುದುರೆ ಮೆರವಣಿಗೆಯ ಮೂಲಕ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಭರ್ಜರಿ ಜಯ ಗಳಿಸಿದ ಹಿನ್ನೆಲೆ, ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹುಟ್ಟೂರು ಹುಲಗೂರು ಗ್ರಾಮಕ್ಕೆ ಇಂದು ಸಚಿವ ಜಮೀರ್ ಅಹಮ್ಮದ್ ಖಾನ್ ಭೇಟಿ ನೀಡಿದರು. ಈ ವೇಳೆ ಜಮೀರ್ ಅಹಮ್ಮದ್ ಅವರನ್ನ ಕುದುರೆ ಮೇಲೆ ಕೂರಿಸಿಕೊಂಡು ಅಜ್ಜಂಪೀರ್ ಖಾದ್ರಿ ಅವರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಕುದುರೆ ಏರಿ ಬಂದ ಸಚಿವ ಜಮೀರ್ ಅಹಮ್ಮದ್ ಖಾನ್ (ETV Bharat) ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಕೆಪಾಬಿಲಿಟಿ ಇದೆ :ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಕೆಪಾಬಿಲಿಟಿ ಇದೆ. ಆದರೆ ತೀರ್ಮಾನ ಮಾಡಬೇಕಿರೋರು ಹೈಕಮಾಂಡ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಶಿಗ್ಗಾಂವಿ ತಾಲೂಕಿನ ಹುಲಗೂರಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಗೆಲುವಿಗೆ ಸತೀಶ್ ಜಾರಕಿಹೊಳಿ ಸಾಹುಕಾರ್ ಕಾರಣ ಎಂದರು. ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಎಂಬ ವಿಚಾರ ಕುರಿತಂತೆ ಮಾತನಾಡಿದ ಅವರು, ಎಲ್ಲರಿಗೂ ಅಭಿಪ್ರಾಯ ಇರುತ್ತೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ಹೈಕಮಾಂಡ್ ತೀರ್ಮಾನ ಮಾಡಿದರೆ ಆಗುತ್ತೆ ಎಂದು ಸಚಿವ ಜಮೀರ್ ತಿಳಿಸಿದರು.
ಹಾಸನದಲ್ಲಿ ಸಮಾವೇಶ ಮಾಡಬೇಕು ಅಂತ ಕೆಲ ಹಿರಿಯರು ಸಲಹೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಕ್ತಿ ಸಮಾವೇಶ ಅಂತ ಅಲ್ಲ, ಸಮಾವೇಶ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನನಗೆ ಅಷ್ಟು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ನಮಗೆ ಉಪ ಚುನಾವಣೆಗಳಲ್ಲಿ ಎಲ್ಲಾ ಸಮಾಜದವರೂ ಮತ ನೀಡಿದ್ದಾರೆ. ಲಿಂಗಾಯತ, ಮರಾಠ ಎಲ್ಲರೂ ವೋಟ್ ಕೊಟ್ಟಿದ್ದಾರೆ. ಚುನಾವಣೆ ಗೆಲುವಿಗೆ ಜನ ಆಶೀರ್ವಾದ ಮಾಡಿದರು. ಗಿಮಿಕ್ ಏನೂ ಮಾಡಿಲ್ಲ ಎಂದು ತಿಳಿಸಿದ್ದಾರೆ. ಪಕ್ಷದ ಗೆಲುವಿಗೆ ಕಾರಣರಾಗಿರುವ ಅಜ್ಜಂಫೀರ್ ಖಾದ್ರಿಗೆ ಸಿಎಂ ಹಾಗೂ ಡಿಸಿಎಂ ಹೆಸ್ಕಾಂ ಚೇರ್ಮನ್ ಮಾಡಿದ್ದಾರೆ ಎಂದು ಹೇಳಿದರು.
ಜನ ಪಠಾಣ್ ಅವರನ್ನ ಗೆಲ್ಲಿಸಿದ್ದಾರೆ : ನಾನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮೂರ್ನಾಲ್ಕು ದಿನ ಪ್ರವಾಸ ಮಾಡಿದ್ದೆ. ಜನ ಬದಲಾವಣೆ ಬಯಸುತ್ತಿದ್ದರು. ಬಸವರಾಜ್ ಬೊಮ್ಮಾಯಿ ಸಿಎಂ ಆಗುವ ಅವಕಾಶ ಸಿಕ್ಕರೂ ತಾಲೂಕು ಅಭಿವೃದ್ಧಿ ಮಾಡಿಲ್ಲ. ಅವರು ತಾಲೂಕೇ ಅಭಿವೃದ್ಧಿ ಮಾಡಿಲ್ಲ ಅಂತ ಜನ ಮಾತನಾಡುತ್ತಿದ್ದರು. ಹೀಗಾಗಿ, ಜನ ಪಠಾಣ್ ಅವರನ್ನ ಗೆಲ್ಲಿಸಿದ್ದಾರೆ ಎಂದು ಸಚಿವ ಜಮೀರ್ ತಿಳಿಸಿದ್ದಾರೆ.
ನಾನು ಕೂಡಾ ಇಷ್ಟು ಅಂತರದಿಂದ ಗೆಲ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಮೂರೂ ಚುನಾವಣೆಯಲ್ಲೂ ಗೆದ್ದೆವು. ಚನ್ನಪಟ್ಟಣದಲ್ಲಿಯೂ ಅಷ್ಟು ಅಂತರದಿಂದ ಗೆಲ್ಲುತ್ತೇವೆ ಅಂತ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜನಕ್ಕೆ ವಕ್ಫ್ ವಿಚಾರದಲ್ಲಿ ಸತ್ಯ ಗೊತ್ತಿದೆ. ವಕ್ಫ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡ್ತಿದಾರೆ ಅಂತ ಜನಕ್ಕೆ ಗೊತ್ತಿತ್ತು ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ನಾವು ಒತ್ತುವರಿ ತೆರವು ಮಾಡುತ್ತಿದ್ದೇವೆ:ಯತ್ನಾಳ್ ಅವರು ವಿಜಯಪುರದಲ್ಲಿ ವಕ್ಫ್ಗೆ 1200 ಎಕರೆ ಬರೆಸಿಕೊಳ್ತಿದ್ದಾರೆ ಎಂದು ಹೇಳಿದ್ದರು. ಯಾರ ಆಸ್ತಿ ಯಾರೂ ಹೊಡೆಯೋಕೆ ಆಗುತ್ತೆ? ಎಂದು ಅವರು ಪ್ರಶ್ನಿಸಿದರು. ವಕ್ಫ್ ಆಸ್ತಿ 1 ಲಕ್ಷ 12 ಸಾವಿರ ಎಕರೆ ಇತ್ತು. ಈಗ 23000 ಎಕರೆ ಇದೆ. ಅಲ್ಪಸಂಖ್ಯಾತರೇ ಒತ್ತುವರಿ ಮಾಡಿದ್ದಾರೆ. ನಾವು ಒತ್ತುವರಿ ತೆರವು ಮಾಡುತ್ತಿದ್ದೇವೆ. ರೈತರು ನಮಗೆ ಅನ್ನ ಕೊಡೋ ಅನ್ನದಾತರು. ಅವರನ್ನು ಮುಟ್ಟೋಕೆ ಸಾಧ್ಯವಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ಇದನ್ನೂ ಓದಿ :ಸಚಿವ ಸಂಪುಟ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ: ಜಮೀರ್ ಅಹ್ಮದ್ ಖಾನ್