ಹಾವೇರಿ : ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದ ಅಬಕಾರಿ ಇಲಾಖೆಯ ದುಡ್ಡು ಬರ್ತಿದೆ ಎಂಬ ಮೋದಿ ಆರೋಪಕ್ಕೆ ಕಂದಾಯ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಮೋದಿಯವರು ಎಲ್ಲಾ ಊರಲ್ಲಿ ಒಂದೊಂದು ಹೇಳ್ತಾರೆ ಎಂದು ತಿರುಗೇಟು ನೀಡಿದರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಂಗೀಭಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸ್ಥಾನದಲ್ಲಿದ್ದಾರೆ. ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಇದಕ್ಕೂ, ಮಹಾರಾಷ್ಟ್ರಕ್ಕೂ ಏನೂ ಸಂಬಂಧವಿಲ್ಲ ಎಂದು ತಿಳಿಸಿದರು.
ವರದಿ ಬಂದ ಬಳಿಕ ಪ್ರಾಸಿಕ್ಯೂಷನ್ಗೆ; ಕೊರೊನಾ ಹಗರಣದ ಪ್ರಾಸಿಕ್ಯೂಷನ್ ಕೊಡೋದು ಆಗಿಲ್ಲ, ಹೇಳಿದ ತಕ್ಷಣ ಯಾವುದೂ ಆಗಲ್ಲ. ವರದಿ ಬರಬೇಕಿತ್ತು, ವರದಿ ಬಂದ ಮೇಲೆ ಕೇಸ್ ಆಗಿದೆ ಅಷ್ಟೇ ಎಂದು ಸಚಿವ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡರು.
ಕೊರೊನಾ ಹಗರಣದ ವೇಳೆ ಬಸವರಾಜ ಬೊಮ್ಮಾಯಿ ಸಿಎಂ ಇದ್ರು, ಸುಧಾಕರ್ ಇದ್ರು. ಅವರ ಮೇಲೆ ಏಕೆ ಎಫ್ಐಆರ್ ಹಾಕಲಿಲ್ಲ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಎಲ್ಲರ ಮೇಲೆ ಎಫ್ಐಆರ್ ಮಾಡಲು ಆಗಲ್ಲ. ಇನ್ವೆಷ್ಟಿಗೇಷನ್ ಟೀಂನವರಿಗೆ ಎಲ್ಲರನ್ನೂ ವಿಚಾರಣೆ ಮಾಡುವ ಅಧಿಕಾರವಿದೆ. ಆಗ ಸುಧಾಕರ್ ಅದಕ್ಕೆ ಸಂಬಂಧಿಸಿದ ಮಂತ್ರಿಗಳು, ಅಷ್ಟಕ್ಕೆ ಸೀಮಿತವಾಗಿ ಇರಬಹುದು. ನಾಳೆ ಬೇರೆ ಮಂತ್ರಿಗಳ ಹೆಸರು ಬರಬಹುದು ಎಂದು ತಿಳಿಸಿದರು.