ಬೆಂಗಳೂರು: ಶಾಸಕಾಂಗ ಸಭೆ ಬಳಿಕವೂ ಕಾಂಗ್ರೆಸ್ ನಾಯಕರ ಅಸಮಾಧಾನಗಳು ಕಡಿಮೆಯಾಗಿಲ್ಲ ಎಂಬುದಕ್ಕೆ ಇದೀಗ ಸತೀಶ್ ಜಾರಕಿಹೊಳಿ ಹೇಳಿಕೆ ಸಾಕ್ಷಿಯಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿರುವ ಅವರು, ಕೆಪಿಸಿಸಿಗೆ ಜನಪ್ರಿಯ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರಿಗೆ ತಿಳಿಸಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು ಕೆಪಿಸಿಸಿ ಅಧ್ಯಕ್ಷರಾಗಿ ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ ಮೇಲೆ ಪಕ್ಷಕ್ಕೆ ಸಮಯ ಕೊಡುವುದು ಕಡಿಮೆಯಾಗಿದೆ. 2023ರಲ್ಲಿ ಇದ್ದ ವೇಗ ಈಗ ಇಲ್ಲ, ಹಾಗಾಗಿ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಂದುವರೆಯಬೇಕಾ, ಬೇರೆಯವರು ಅಧ್ಯಕ್ಷರಾಗಬೇಕಾ? ಎಂಬುದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕು. ಹೈಕಮಾಂಡ್ ಸಹ ಈ ಬಗ್ಗೆ ತೀರ್ಮಾನ ಬೇಗ ಮಾಡಬೇಕು ಎಂದು ಒತ್ತಾಯಿಸಿದರು.
ಹೈಕಮಾಂಡ್ ಜೊತೆ ಚರ್ಚಿಸಲಿ: ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು, ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಿ ಎಂದು ಸುರ್ಜೇವಾಲಾ ಅವರಲ್ಲಿ ಮನವಿ ಮಾಡಲಾಗಿದೆ. ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಸಂಬಂಧ ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನೂ ಪಡೆಯಲಿ, ಶಾಸಕರ ಬೆಂಬಲ ಇರುವವರು ಅಧ್ಯಕ್ಷರಾಗಲಿ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕಿದೆ. ಎಲ್ಲ ಹಿರಿಯ ನಾಯಕರ ಅಭಿಪ್ರಾಯವೂ ಇದೇ ಆಗಿದೆ. ಎಲ್ಲ ಶಾಸಕರ ಅಭಿಪ್ರಾಯವನ್ನು ಆಲಿಸಿ ಹೈಕಮಾಂಡ್ ಶಾಸಕರ ಒತ್ತಾಸೆಯಂತೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದು ಒಳ್ಳೆಯದು ಎಂದು ಹೇಳಿದರು.