ಹುಬ್ಬಳ್ಳಿ:ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ಧ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆದರೆ, ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಎಂದು ಸ್ವಾಮೀಜಿಯನ್ನು ನಾವು ಕೇಳಿಲ್ಲ. ಬೆಂಬಲ ಘೋಷಿಸಿದರೆ ಹೆಗಲ ಮೇಲೆ ಇಟ್ಟುಕೊಳ್ಳುತ್ತೇವೆ. ಶ್ರೀಗಳ ನಡೆಯನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನೇಹಾ ಹತ್ಯೆ ವಿಚಾರ: "ಎಷ್ಟೋ ಸಂದರ್ಭಗಳಲ್ಲಿ ಹಿಂದೂ - ಹಿಂದೂಗಳ ಹತ್ಯೆಯಾಗುತ್ತದೆ. ಅಲ್ಲಿ ಯಾರು ನಮ್ಮ ಹಿಂದುತ್ವವಾದಿಗಳು ಹೋಗುವುದಿಲ್ಲ. ಅಲ್ಲಿ ಹಿಂದು ಹೆಣ್ಮಕ್ಕಳು ಸಾಯುತ್ತಿರುತ್ತಾರೆ. ಆದರೆ ನೇಹಾ ಹಿರೇಮಠ ವಿಚಾರದಲ್ಲಿ ಮುಸ್ಲಿಂ ವಿಚಾರ ಬಂದಿದಕ್ಕೆ ಇಷ್ಟೆಲ್ಲಾ ಪ್ರಚಾರ ಪಡೆದುಕೊಳ್ಳುತ್ತಿದೆ. ಇಂತಹ ಹಲವಾರು ಉದಾಹರಣೆ ಕೊಡಬಹುದು. ಚುನಾವಣೆ ಹತ್ತಿರ ಬಂದಿದ್ದು, ಇದು ಅವರಿಗೆ ಹಬ್ಬದಂತಾಗಿದೆ. ಯಾರ್ಯಾರೋ ಬಂದು ಏನೇನೋ ಮಾತಾಡಿದ್ದಾರೆ. ಬಿಜೆಪಿಯ ಇಡೀ ಇತಿಹಾಸ ತೆಗೆದು ನೋಡಿದರೆ ಒಂದು ಹಿಂದೂ ಸಾವಾದರೆ, ಅದನ್ನೇ ದೊಡ್ಡ ವಿಚಾರವಾಗಿ ಮಾಡುತ್ತಾರೆ. 2021ರಲ್ಲಿ ಬಂದ ನೀತಿ ಆಯೋಗದ ವರದಿ ಪ್ರಕಾರ 13 ಸಾವಿರ ಹಣ್ಮಕ್ಕಳು ಕಾಣೆಯಾಗಿದ್ದಾರೆ. ಗುಜರಾತದಲ್ಲಿ ದಿನಕ್ಕೆ 6 ಅತ್ಯಾಚಾರವಾಗುತ್ತದೆ. ಅದರ ಬಗ್ಗೆ ಮಾತನಾಡಲ್ಲ. ಬದಲಿಗೆ ನೇಹಾ ಹಿರೇಮಠ ಅವರಂತಹ ಸಾವಾದರೆ ಬರುವುದು ಹಿಗ್ಗಾ-ಮುಗ್ಗಾ ಮಾತನಾಡುವುದು ಆಗಿದೆ. ಜತೆಗ ಇಂತಹ ಕೃತ್ಯಕ್ಕೆ ಕಾಂಗ್ರೆಸ್ ಪ್ರಚೋದನೆ ಕೊಡುತ್ತದೆ ಎಂದು ಆರೋಪಿಸುವುದು, ಕುಮ್ಮಕ್ಕು ಕೊಡುತ್ತದೆ ಎಂದು ಹೇಳಿ ಹೋಗುವುದು ಇವರ ಕೆಲಸವಾಗಿದೆ" ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.