ಮೈಸೂರು:ಡಿ.ಕೆ.ಶಿವಕುಮಾರ್ ಅವರಿಗೆ ಡಿಸೆಂಬರ್ ಒಳಗೆ ಸಿಎಂ ಆಗುವ ಯೋಗ ಇದೆಯೆಂದು ಅಜ್ಜಯ್ಯ ಹೇಳಿದ್ದಾರೆ. ಆದ್ದರಿಂದ ಅವರು ಹೊರಗೆ ಬಂಡೆ, ಒಳಗೆ ಬೇರೆ ಆಸೆ ಇಟ್ಟುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾಂದೋಲನ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ದೊಡ್ಡ ಮಟ್ಟದ ಭಾಷಣ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲಾ ಕಡೆ ಹೇಳಿದ ಮಾತನ್ನೇ ಇಲ್ಲಿಯೂ ಹೇಳಿದ್ದಾರೆ. ಜನಾಂದೋಲನ ಯಾವುದೇ ನಿರೀಕ್ಷೆ ಇಲ್ಲದೆ ಮುಕ್ತಾಯವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಶುದ್ದ ಹಸ್ತರು ಎಂದು ನೂರು ಸಲ ಹೇಳಿದ್ದಾರೆ. ಆದರೆ, ಶುದ್ದ ಹಸ್ತರಾದರೆ ಸಿಬಿಐ ತನಿಖೆಗೆ ಏಕೆ ಭಯ ಎಂದು ಅಶೋಕ್ ಪ್ರಶ್ನಿಸಿದರು.
ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ: ಮುಡಾ ವಿಚಾರದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪಾದಯಾತ್ರೆಯ ಸಮಾರೋಪ ಸಮಾರಂಭ ಮುಕ್ತಾಯವಾದ ನಂತರ ಮುಂದಿನ ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನನ್ನದೇನೂ ಪಾತ್ರ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಹಗರಣವನ್ನು ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿದೆ. ಹಗರಣದ ಉರುಳು ಸಿಎಂಗೆ ಸುತ್ತಿಕೊಳ್ಳುತ್ತದೆ ಎಂದು ಅಂಕಿಅಂಶಗಳೊಂದಿಗೆ ವಿವರಿಸಿದರು.