ಪ್ರಿಯಾಂಕ್ ಖರ್ಗೆ (ETV Bharat) ಬೆಂಗಳೂರು: ನಮ್ಮ ಮೇಲೆ ಗೂಬೆ ಕೂರಿಸೋದು ಬಿಡಿ. ದೇವರಾಜೇಗೌಡ ಸಾಕ್ಷಿಗಳನ್ನು ಜಡ್ಜ್ ಮುಂದೆ ಕೊಡಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇವರಾಜೇಗೌಡ ಆರೋಪ ಬಗ್ಗೆ ಪ್ರತಿಕ್ರಿಯಿಸುತ್ತಾ, ಅವರು ಈ ರೀತಿ ಉಡಾಫೆ ಮಾತನಾಡೋದನ್ನ ಬಿಡಬೇಕು. 200-300 ಜನ ಸಂತ್ರಸ್ತೆಯರಿದ್ದಾರೆ. ದೇವರಾಜೇಗೌಡ ಮೇಲೆ ಲೈಂಗಿಕ ದೌರ್ಜನ್ಯದ ದೂರಿದೆ. ಸರ್ಕಾರ ಬೀಳುತ್ತೆ ಅನ್ನೋದಕ್ಕೆ ಇವರೆಲ್ಲ ಯಾರು. ಒಮ್ಮೆಯೂ ಎಂಎಲ್ಎ ಆಗಿಲ್ಲ. ಆಗಲೇ ಸರ್ಕಾರ ಪತನ ಅಂತಾರೆ. ಎಲ್ಲಿಂದ ಬರ್ತಾರೆ ಇವರೆಲ್ಲ?. ನೀವು ಮಾಡಿದ ಕೆಟ್ಟ ಕೆಲಸಕ್ಕೆ ನಾವು ಪ್ರಚೋದನೆ ಕೊಡಬೇಕಾ?. ನಮಗೇನೂ ಬೇರೆ ಕೆಲಸ ಇಲ್ವಾ?. ರಷ್ಯಾ ಉಕ್ರೇನ್ ವಾರ್ ನಿಲ್ಲಿಸಿದವರಿಗೆ ಪ್ರಜ್ವಲ್ ಕರೆತರಲು ಆಗುವುದಿಲ್ವಾ? ಎಂದು ಪ್ರಶ್ನಿಸಿದರು.
100 ಕೋಟಿ ಆಫರ್ ಇತ್ತು ಅಂತ ಅಮಿತ್ ಶಾ ಅವರಿಗೆ ಹೇಳಬಹುದಿತ್ತಲ್ಲ? ಯಾಕೆ ಅವರಿಗೆ ಹೇಳಲಿಲ್ಲ. 5 ಕೋಟಿ ಕೊಟ್ಟರು ಅಂದರೆ ಹೇಗೆ?. ಎಷ್ಟು ಟೆಂಪೋಗಳಲ್ಲಿ ದುಡ್ಡು ತುಂಬಬೇಕು ಅಂತ ಬಿಜೆಪಿಯವರಿಗೆ ಗೊತ್ತು. ಅದರ ಬಗ್ಗೆ ವಿಡಿಯೋ ರಿಲೀಸ್ ಮಾಡಲಿ. ಪೊಲೀಸ್ ವ್ಯಾನ್ನಲ್ಲಿ ಕುಳಿತು ಹೇಳಿ ಓಡಿಹೋದರೆ ಅದನ್ನು ಸಾಕ್ಷಿ ಅಂತ ಹೇಳುವುದಕ್ಕೆ ಆಗುತ್ತಾ?. ದೇವರಾಜೇಗೌಡ ಹೇಳಿಕೆ ಬಗ್ಗೆ ಸಚಿವರು ತಿರುಗೇಟು ನೀಡಿದರು.
ನಮಗೆ ಚುನಾವಣೆ ಬಿಟ್ಟು ಬೇರೆ ಕೆಲಸ ಇರಲಿಲ್ವಾ?. ಬರ ನಿರ್ವಹಣೆ ಬಿಟ್ಟು ಬೇರೆ ಕೆಲಸ ಇರಲಿಲ್ವಾ?. ಬಿಜೆಪಿ ಜೆಡಿಎಸ್ ಪ್ರಕರಣ ಡೈವರ್ಟ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಾಧ್ಯಮದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಜ್ವಲ್ ಯಾಕೆ ಈ ಕೆಲಸ ಮಾಡಿದ?. ಯಾಕೆ ವಿಡಿಯೋ ಮಾಡಿಕೊಂಡ?. ಯಾಕೆ ವಿಡಿಯೋ ವೈರಲ್ ಮಾಡಿದ್ರು?. ಇದಕ್ಕೆ ಬಿಜೆಪಿ ಜೆಡಿಎಸ್ ನೇರ ಉತ್ತರ ನೀಡಲಿ. ಪ್ರಕರಣದ ಬಗ್ಗೆ ಮೊದಲು ಮಾತನಾಡೋಣ. ಅದನ್ನು ಬಿಟ್ಟು ಸುತ್ತಿ ಬಳಸಿ ಮಾತು ಬೇಡ. ವಿಡಿಯೋಗಳು ಖಾಸಗಿ ಮೊಬೈಲ್ನಲ್ಲಿದ್ದಾಗ ಡ್ರೈವರ್ ಹತ್ತಿರ ಹೇಗೆ ಹೋಯ್ತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಪೆನ್ಡ್ರೈವ್ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್: ನನಗೆ 100 ಕೋಟಿ ಆಫರ್ ಕೊಟ್ಟಿದ್ದರು; ವಕೀಲ ದೇವರಾಜೇಗೌಡ ಆರೋಪ - Pen drive case
ಡ್ರೈವರ್ನಿಂದ ನಿಮ್ಮ ಅಧಿಕೃತ ಅಭ್ಯರ್ಥಿ ಬಳಿ ಹೇಗೆ ಹೋಯ್ತು?. ಅಮಿತ್ ಶಾ ಭೇಟಿ ಮಾಡಿ ಅವರ ಗಮನಕ್ಕೆ ತಂದಿಲ್ವೇ?. ಗಮನಕ್ಕೆ ತಂದಿದ್ದನ್ನ ದೇವರಾಜೇಗೌಡ ಹೇಳಿದ್ದಲ್ವಾ?. ಹಾಸನದ ಪಾರ್ಕ್ ಸ್ಟೇಡಿಯಂಗಳಲ್ಲಿ ಪೆನ್ ಡ್ರೈವ್ ಸಿಗೋದಕ್ಕೆ ಅಮಿತ್ ಶಾ ಕಾರಣನಾ?. ಮಾಜಿ ಶಾಸಕರ ಆಪ್ತರ ಬಂಧನ ಆಗಿದೆ. ಅಲ್ಲೆಲ್ಲ ಪೆನ್ ಡ್ರೈವ್ ಸಿಕ್ಕಿದೆ ಎಂದು ಕಿಡಿ ಕಾರಿದರು.
ಬಿಜೆಪಿಯ ಅಭಿರುಚಿ ಇರೋದೇ ಬೇರೆ. ಅವರ ಕಾಳಜಿ ಇರೋದು ಬೇರೆ. ಮನೆ ಮಗನಿಗೆ ಏನೂ ಆಗಬಾರದು ಅಂತ ಅವರ ಕುಟುಂಬದ ಗೌರವದ ಬಗ್ಗೆ ಮಾತ್ರ ಕಾಳಜಿ ಇದೆ. ಪ್ರಜ್ವಲ್ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತೇವೆ ಅಂತ ಹೇಳಿದ್ರಾ?. ಆ ಕುಟುಂಬದಲ್ಲೇ ಮೇಲ್ಮನೆ, ಕೆಳಮನೆ, ರಾಜ್ಯಸಭೆ ಸದಸ್ಯರಿದ್ದಾರೆ. ಈ ಕಳಂಕ ತೊಳೆಯಲು ರಾಜೀನಾಮೆ ಕೊಟ್ಟಿದ್ದಾರಾ?. ವಿಚಾರಣೆಗೆ ಕರೆದ್ರೂ ಯಾಕೆ ಪ್ರಜ್ವಲ್ ಬರುತ್ತಿಲ್ಲ. ಅಮಿತ್ ಶಾ ಅವರಿಗೆ ಎಲ್ಲವೂ ಗೊತ್ತಿದೆ ಅಂದ್ರಲ್ಲಾ, ಯಾಕೆ ಯಾರೂ ಆ ಬಗ್ಗೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ದೇವರಾಜೇಗೌಡ ಹೊರ ಬಂದು ಸರ್ಕಾರ ಪತನ ಆಗುವುದಾದರೆ, ಅವರು ಜೈಲಿನಲ್ಲೇ ಇರಲಿದ್ದಾರೆ: ಪರಮೇಶ್ವರ್ ವ್ಯಂಗ್ಯ - Home Minister
ಈಗಲಾದರೂ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಲಿ. ಹುಬ್ಬಳ್ಳಿ ಪ್ರಕರಣದಲ್ಲಿ ಎಷ್ಟು ಆ್ಯಕ್ಟಿವ್ ಇದ್ರು. ಹಾಸನ ಪ್ರಕರಣದಲ್ಲಿ ಯಾಕೆ ಬಿಜೆಪಿ ಆ್ಯಕ್ಟಿವ್ ಇಲ್ಲ?. ಸಿಬಿಐ ಪ್ರಕರಣಗಳಲ್ಲಿ ಏನು ಸಾಧನೆ ಮಾಡಿದ್ದಾರೆ?. ಎಸ್ಐಟಿ ಪ್ರಾಥಮಿಕ ವರದಿಯೇ ಬಂದಿಲ್ಲ. ಇನ್ನೂ ಆಗಲೇ ಸಿಬಿಐ ಅಂತ ಯಾಕೆ ಹೇಳ್ತಿದ್ದೀರಿ?. ಒತ್ತಾಯ ಮಾಡಲು ಎಷ್ಟು ಟೆಂಪೋಗಳಲ್ಲಿ ಬಂದಿದೆ ದುಡ್ಡು?. ಸಂತ್ರಸ್ತೆಯರಿಗೆ ಒಮ್ಮೆಯಾದರೂ ಸಂತೈಸಿದ್ದೀರಾ?. ರಾಜ್ಯದ ಮರ್ಯಾದೆ ಸಂಪೂರ್ಣ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ದೇವರಾಜೇಗೌಡರಿಗೂ ನನಗೂ ಸಂಬಂಧ ಇಲ್ಲ, ಸಾಮಾನ್ಯರೂ ಇಂತಹ ಕೆಲಸ ಮಾಡಲ್ಲ: ಸಚಿವ ಚಲುವರಾಯಸ್ವಾಮಿ - Minister Chaluvarayaswamy