ಕಲಬುರಗಿ :ಸಂಸದಡಿ.ಕೆ ಸುರೇಶ್ ವಿರುದ್ದ ಗುಂಡಿಕ್ಕಿ ಕೊಲ್ಲೋ ಕಾನೂನು ತರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಆ ಕಾನೂನು ತಂದರೆ ಬಿಜೆಪಿ ಅರ್ಧ ಖಾಲಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವರ ಪಕ್ಷದಲ್ಲೇ ಅವರಿಗೆ ಕಿಮ್ಮತ್ತಿಲ್ಲ. ಅವರಿಗೆ ನಿವೃತ್ತಿ ಕೊಡಿಸಿ ಕೂರಿಸಿದ್ದಾರೆ. ಅವರ ಮಗನಿಗೂ ಟಿಕೆಟ್ ಕೊಡಿಸೋಕೆ ಅವರಿಂದ ಆಗಿಲ್ಲ. ಇವೆಲ್ಲ ಬಿಟ್ಟು ಬೆಳಗ್ಗೆ ರಾಮಾಯಣ, ಮಧ್ಯಾಹ್ನ ಕಿರ್ತನೆ, ಸಂಜೆ ಹನುಮಾನ ಚಾಲೀಸ್ ಓದಿಕೊಂಡು ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿಯೂ ಭ್ರಷ್ಟಾಚಾರ ನಡಿಯುತ್ತಿದೆ ಎಂಬ ಕೆಂಪಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ನಾವು ಆಯೋಗ ರಚನೆ ಮಾಡಿದ್ದೇವೆ. ಅಂತಹದು ಏನಾದರೂ ದಾಖಲೆಗಳು ಕೆಂಪಣ್ಣ ಅವರ ಹತ್ತಿರ ಇದ್ದರೆ ಆಯೋಗಕ್ಕೆ ನೀಡಲಿ. ನಾವು ಪಾರದರ್ಶಕ ಆಡಳಿತ ಮಾಡುತ್ತಿದ್ದೇವೆ. ಸಣ್ಣ ತಪ್ಪು ಆಗಿದ್ದರೂ ಜನ ಮತ್ತೊಮ್ಮೆ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಬಿಜೆಪಿ ವ್ಯಾಪಾರ ಸೌಧ ಮಾಡಿತ್ತು. ನಾವು ಜನ ಸೌಧ ಮಾಡ್ತಿದ್ದೇವೆ ಎಂದರು.
ತೆರಿಗೆ ವಿಚಾರದಲ್ಲಿ ಬಿಜೆಪಿಯವರು ಕನ್ನಡಿಗರ ಪರ ಮಾತನಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಸೋಕೆ ಹೋಗುತ್ತಿದ್ದಾರೆ. ಮೋದಿಯವರು, ಸಿಎಂ ಆಗಿದ್ದಾಗ ಏನೇನು ಮಾತನಾಡಿದ್ದರು ಅನ್ನೊದು ಬಿಜೆಪಿಯವರು ದಯವಿಟ್ಟು ತಿಳಿದುಕೊಳ್ಳಲಿ. ಆಗ ಮೋದಿಯವರು ನಮಗೂ ಟ್ಯಾಕ್ಸ್ ಕೇಳಬೇಡಿ, ನಿಮ್ಮನ್ನ ನಾವು ಕೇಳಲ್ಲ ಎಂದಿದ್ದರು. ಅದು ದೇಶ ವಿಭಜನೆ ಆಗೋಲ್ವಾ? ಎಂದು ಪ್ರಶ್ನೆ ಮಾಡಿದ ಪ್ರಿಯಾಂಕ್ ಖರ್ಗೆ, ನಾವು ಗ್ಯಾರಂಟಿ ನೀಡಿದ್ದು ಜನರಿಗೆ ನೇರವಾಗಿ ಹೋಗುತ್ತಿದೆ. ಆರ್ಥಿಕ ದಿವಾಳಿ ಆಗಿದ್ದರೆ ಜನರಿಗೆ ಗ್ಯಾರಂಟಿ ಕೊಡೋಕೆ ಹೇಗೆ ಸಾಧ್ಯವಾಗ್ತಿತ್ತು...? ಎಂದು ತಿರುಗೇಟು ನೀಡಿದರು.