ಕರ್ನಾಟಕ

karnataka

ETV Bharat / state

ಅಹಿಂದಾ, ನಾರಿಶಕ್ತಿ ಎನ್ನುವ ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡುವ ಗೌರವ ಇದೇನಾ?: ಜೋಶಿ ಪ್ರಶ್ನೆ - ಸಂವಿಧಾನ

ಸಿದ್ದರಾಮಯ್ಯನವರೇ ನಿಮಗೂ ನಿಮ್ಮ ಪಕ್ಷಕ್ಕೂ ಅದೇನೋ ಮಂಕು ಬಡಿದಿದೆ. ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿ ಇರುವ, ಅದರಲ್ಲೂ ದೇಶದ ಒಬ್ಬ ಮಹಿಳಾ ಪ್ರಥಮ ಪ್ರಜೆ ಬಗ್ಗೆ ಏಕವಚನದಲ್ಲಿ ಮಾತನಾಡುವುದು ನಿಮ್ಮ ಸಂಸ್ಕೃತಿ ಆಗಿದೆಯೇ? ಎಂದು ಸಚಿವ ಪ್ರಹ್ಲಾದ್​ ಜೋಶಿ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Minister Prahlad Joshi
ಸಚಿವ ಪ್ರಹ್ಲಾದ್​ ಜೋಶಿ

By ETV Bharat Karnataka Team

Published : Jan 29, 2024, 8:23 PM IST

ಬೆಂಗಳೂರು:ಅಹಿಂದ, ನಾರಿ ಶಕ್ತಿ ಎನ್ನುತ್ತ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರು ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳಾ ರಾಷ್ಟ್ರಪತಿಗೆ ಕೊಡುವ ಗೌರವ ಇದೇನಾ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ನಿಮಗೂ ನಿಮ್ಮ ಪಕ್ಷಕ್ಕೂ ಅದೇನು ಮಂಕು ಬಡಿದಿದೆ. ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿ ಇರುವ, ಅದರಲ್ಲೂ ದೇಶದ ಒಬ್ಬ ಮಹಿಳಾ ಪ್ರಥಮ ಪ್ರಜೆ ಬಗ್ಗೆ ಏಕವಚನದಲ್ಲಿ ಮಾತನಾಡುವುದೇ ನಿಮ್ಮ ಸಂಸ್ಕೃತಿ ಆಗಿದೆಯೇ? ಎಂದು ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕವಚನದ ಶೋಕಿ:ದೇಶದ ಪ್ರಧಾನಿಯನ್ನು, ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಮಹಿಳಾ ರಾಷ್ಟ್ರಪತಿ ಬಗ್ಗೆ ಬಹಿರಂಗ ಸಭೆಯಲ್ಲೇ ಏಕವಚನದಲ್ಲಿ ಮಾತನಾಡುವ ನಿಮ್ಮ ಸಂಸ್ಕೃತಿ- ಸಭ್ಯತೆ ಇದೇನಾ? ಎಂದು ಪ್ರಹ್ಲಾದ ಜೋಶಿ ಹರಿ ಹಾಯ್ದಿದ್ದಾರೆ. ಇದು, ರಾಷ್ಟ್ರಪತಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗೆ ನೀವು ಅಗೌರವ ತೋರಿದಂತೆ ಎಂದು ಹೇಳಿದ್ದಾರೆ.

ದುರಹಂಕಾರ ನಿಮ್ಮ ಮತ್ತು ಪಕ್ಷದ ಅವನತಿಗೆ ಬುನಾದಿ ಆಗಲಿದೆ ಎಚ್ಚರ!:ಸಿದ್ದರಾಮಯ್ಯ ಅವರೇ, ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ ಎಂದು ಸಚಿವ ಜೋಶಿ ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್​​​ಗೆ ಗೌರವವಿಲ್ಲ ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಯೇ ಇದ್ದಂತಿದೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್​​​​​​​​​ ನಾಯಕರಾಗಿರುವ ಅಧೀರ ರಂಜನ್ ಚೌಧರಿ ನಂತರ ಈಗ ಸಿದ್ದರಾಮಯ್ಯ ಸರದಿ... ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಮೈತ್ರಿಯ ಪಟಾಲಂ ಕೂಡ ಉಪರಾಷ್ಟ್ರಪತಿಗಳನ್ನು ಸಂಸತ್ ಆವರಣದಲ್ಲೇ ಅಪಹಾಸ್ಯ ಮಾಡಿತ್ತು. ಪರಿಣಾಮ ಕಲಾಪದಿಂದ ಬಹಿಷ್ಕರಿಸಲಾಗಿತ್ತು ಎಂಬುದನ್ನು ಮರೆಯಬೇಡಿ ಎಂದು ಸಚಿವ ಜೋಶಿ ಹಿಂದಿನ ಘಟನೆ ಬಗ್ಗೆ ನೆನಪು ಮಾಡಿಕೊಟ್ಟರು.

ಸಿಎಂ ತಪ್ಪೊಪ್ಪಿಕೊಳ್ಳಲಿ :ಇಂಥ ಬೇಜವಾಬ್ದಾರಿ ನಡವಳಿಕೆ ಅತ್ಯಂತ ಪ್ರಜಾಪ್ರಭುತ್ವಕ್ಕೆ ಮಾರಕ. ಮಾತೆತ್ತಿದರೆ ಸಂವಿಧಾನ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ತಪ್ಪೊಪ್ಪಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಒತ್ತಾಯ ಮಾಡಿದರು.

ಇದನ್ನೂಓದಿ:ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದ ಸಿಎಂ: ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ? ಎಂದ ಹೆಚ್​ಡಿಕೆ

ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ಏಕವಚನ ಬಳಸಿದ್ದರು. ಈ ಸಂಬಂಧ ಮಾಜಿ ಸಿಎಂ ಹೆಚ್​​ಡಿಕೆ ಸಿದ್ದರಾಮಯ್ಯ ಅವರು ಆಡಿದ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಸಿಎಂ ತಾವಾಡಿದ ಮಾತಿಗೆ ವಿಷಾದ ಕೂಡಾ ವ್ಯಕ್ತಪಡಿಸಿದ್ದರು.

ABOUT THE AUTHOR

...view details