ಮಂಡ್ಯ: ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಕಾಂಗ್ರೆಸ್ ಕಚೇರಿಯಿಂದ ಗಾಂಧಿ ಪ್ರತಿಮೆ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ನೂರಾರು ಕಾಂಗ್ರೆಸ್ ಕಾರ್ಯಕರ್ತ ಜಾಥಾದಲ್ಲಿ ಭಾಗವಹಿಸಿ ಗಾಂಧೀಜಿ ಸ್ಮರಣೆ ಮಾಡಿದರು. ಗಾಂಧಿ ಟೋಪಿ ಧರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಕೂಗಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಶೇಖ್ ತನ್ವಿರ್ ಆಸಿಫ್, ಸೇರಿ ಹಲವರು ಭಾಗಿಯಾಗಿದ್ದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಸಿಎಂ ಪತ್ನಿಯಿಂದ ಮುಡಾ ಸೈಟ್ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ "ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಪಕ್ಕದವರ ತಟ್ಟೆ ಬಗ್ಗೆ ಯೋಚನೆ ಮಾಡ್ತಾರಂತೆ. ಮುಡಾದಲ್ಲಿ ನೂರಾರು ಜನ ಫಲಾನುಭವಿಗಳಿದ್ದಾರೆ. ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರು ಇದ್ದಾರೆ. ಎಲ್ಲರೂ ಸರ್ಕಾರದ ಅನುಮೋದನೆ ಇಲ್ಲದೇ ಅನಧಿಕೃತವಾಗಿ ಸೈಟ್ ಪಡೆದ ಬಹಳಷ್ಟು ಜನ ಇದ್ದಾರೆ. ತನಿಖೆ ಬಳಿಕ ಎಲ್ಲವೂ ಸತ್ಯ ಹೊರಗೆ ಬರುತ್ತೆ. 15, 20, 30, 50 ಸೈಟ್ಗಳನ್ನು ತೆಗೆದುಕೊಂಡಿರುವವರ ಬಗ್ಗೆಯೂ ಹೊರಗೆ ಬರುತ್ತೆ." ಎಂದರು.
"ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಬಿದ್ದಿದ್ದಾರೆ. ಕಾನೂನಲ್ಲಿ ಅಧಿಕಾರಿಗಳಿಗೆ ಒಂದು ಮಿತಿ ಇದೆ. ಅವರು ಕೂಡ ಈ ದೇಶದ ಪ್ರಜೆ. ಏನು ಬೇಕಾದರೂ ಮಾತನಾಡಬಹುದಾ? ಕಾನೂನಾತ್ಮಕ ವಿಚಾರವನ್ನು ಅಧಿಕಾರಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಎದುರಿಸಲಿ" ಎಂದರು.