ಕಾರವಾರ:ಹಾಲು ಕೊಡುವ ಗೋ ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆಗಳು ಮುಂದುವರಿದಲ್ಲಿ ತಪ್ಪತಸ್ಥರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದು ಸಚಿವ ಮಂಕಾಳ್ ವೈದ್ಯ ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಸು ಕಳ್ಳತನ ಹಲವು ವರ್ಷಗಳಿಂದ ನಡೆದುಬಂದಿದೆ. ಇಂತಹ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಹಲವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಇನ್ನೂ ಮೇಲೆಯೂ ಇಂತಹ ಘಟನೆಗಳು ಮರುಕಳಿಸಿದರೇ ನಾವು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಸಚಿವ ಮಂಕಾಳ ವೈದ್ಯ (ETV Bharat) ಶಾಸಕರ ವಿರುದ್ಧ ಅಸಮಾಧಾನ:ಇನ್ನು ಶಾಸಕ ದಿನಕರ್ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ ಸಚಿವರು, ಕುಮಟಾದಲ್ಲೂ ಗೋಹತ್ಯೆ ನಡೆದಿದೆ. ಹಾಗಂತಾ ದಿನಕರ ಶೆಟ್ಟಿ ಅವರು ದಿನಕರ ಖಾನ್ ಆಗಿಬಿಡ್ತಾರಾ? ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಗೋಹತ್ಯೆಗಳು ನಡೆದಿವೆ. ಬಿಜೆಪಿ ಕೆಟ್ಟ ರಾಜಕಾರಣ ಮಾಡುವುದನ್ನು ಬಿಡಬೇಕು. ನಮ್ಮ ಸರ್ಕಾರದಲ್ಲಿ ಗೋಹತ್ಯೆ ಮಾಡಿದ ಆರೋಪಿಗಳ ಬಂಧನವಾಗಿದೆ. ನಾವು ಸುಮ್ಮನೆ ಕುಳಿತಿಲ್ಲ, ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ, ಗೃಹ ಸಚಿವರು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಟೀಕೆಗಳಿಗೆ ಉತ್ತರಕೊಟ್ಟ ಸಚಿವರು:ಯಲ್ಲಾಪುರ ಅಪಘಾತದಲ್ಲಿ 13 ಮಂದಿ ಸತ್ತರೂ ಸಚಿವರು ಬಂದಿಲ್ಲ ಎನ್ನುತ್ತಾರೆ. ನಾನು ಬೆಂಗಳೂರಿನಲ್ಲಿದ್ರೂ ನಮ್ಮ ಶಾಸಕರು ಬಂದಿದ್ದಾರೆ. ಅಧಿಕಾರಿಗಳು ಇದ್ದಾರೆ. ಹಾವೇರಿ ಶಾಸಕ ಯಾಸೀರ್ ಪಠಾಣ್ ಇಡೀ ದಿನ ಅಲ್ಲೇ ಇದ್ದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರೂ ಕೂಡ ನಮ್ಮವರೇ, ಅವರು ಕೂಡ ಸ್ಥಳದಲ್ಲಿದ್ದರು. ಆದರೆ, ಮಂಕಾಳು ವೈದ್ಯ ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಸುಮ್ಮನೆ ಹೇಳಬೇಡಿ. ಮಂಕಾಳು ವೈದ್ಯ ಎಲ್ಲಿಯೂ ಮಂಕಾಗುವುದಿಲ್ಲ. ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ, ಕೆಲಸ ಮಾಡಿಕೊಡುತ್ತೇವೆ ಎಂದು ತಿರುಗೇಟು ನೀಡಿದರು.
ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ಸರಿ ಆಗಬೇಕು. ಈ ಬಗ್ಗೆ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ನಮ್ಮ ಸರ್ಕಾರದಲ್ಲಿ ಶಾಸಕರಿಗೂ ಸಚಿವರಷ್ಟೇ ಪವರ್ ಇದೆ. ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿದ್ರೂ ಕಾಂಗ್ರೆಸ್ ಜೊತೆಗಿದ್ದಾರೆ. ನಮ್ಮ ಶಾಸಕರು ನನಗಿಂತ ಸಕ್ರಿಯರಾಗಿದ್ದಾರೆ. ಶಾಸಕರು ಎಲ್ಲವನ್ನೂ ನನ್ನ ಬಳಿಯೇ ಕೇಳಬೇಕೆಂದೇನಿಲ್ಲ. ನೇರವಾಗಿ ಸಿಎಂ ಬಳಿ ಹೋಗಿ ಶಾಸಕರು ಕೆಲಸ ಮಾಡಿಕೊಂಡು ಬರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಗೋ ಹತ್ಯೆ ಪ್ರಕರಣ: ನಾಪತ್ತೆಯಾದ ಆರೋಪಿಗಳ ಪತ್ತೆಗೆ 50 ಸಾವಿರ ಬಹುಮಾನ ಘೋಷಿಸಿದ ಉತ್ತರ ಕನ್ನಡ ಎಸ್ಪಿ
ಇದನ್ನೂ ಓದಿ: ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು