ಬೆಂಗಳೂರು: "ಕಲ್ಯಾಣ ಕರ್ನಾಟಕದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿ ಆರಂಭಿಸಲಾಗುತ್ತದೆ. ಎಲ್ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಆವರಣದಲ್ಲಿ ಶಿಕ್ಷಣ ಸಿಗುವಂತೆ ಮಾಡುವ ಗುರಿಯೊಂದಿಗೆ ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಸಿಎಸ್ಆರ್ ನಿಧಿ ಬಳಸಿಕೊಂಡು ಶಾಲೆಗಳ ಅಭಿವೃದ್ಧಪಡಿಸಲಾಗುತ್ತಿದೆ" ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಿಎಸ್ಆರ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "16 ತಿಂಗಳ ಹಿಂದೆ ಸಚಿವನಾದೆ, ಆಗ ನನಗೆ ಸವಾಲಿನ ಜವಾಬ್ದಾರಿ ನೀಡಲು ಸಿಎಂ ಸೂಚಿಸಿದ್ದರು. ಅದರಂತೆ ಈಗ ನಾನು 44 ಸಾವಿರ ಕೋಟಿ ವಾರ್ಷಿಕ ವಿನಿಯೋಗದ ಶಿಕ್ಷಣ ಇಲಾಖೆ ನಿರ್ವಹಣೆ ಮಾಡುತ್ತಿದ್ದೇನೆ. 1-12 ನೇ ತರಗತಿವರೆಗೆ 56 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. 56 ಸಾವಿರ ಶಿಕ್ಷಕರ ಕೊರತೆ ಇದೆ. 45 ಸಾವಿರ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಈಗ 12,500 ಶಿಕ್ಷಕರ ನೇಮಕಾತಿಯಾಗುತ್ತಿದೆ. 5,000 ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಸದ್ಯದಲ್ಲೇ" ಆಗಲಿದೆ ಎಂದರು.
"ವರ್ಷದ ಹಿಂದೆ ಸಿಎಸ್ಆರ್ ಕಾಂಕ್ಲೇವ್ ನಡೆಸಿದ್ದೆವು. ಶಿಕ್ಷಣಕ್ಕೆ ಸೀಮಿತವಾಗಿ ಸಿಎಸ್ಆರ್ ನಿಧಿ ಪೂರ್ಣ ಪ್ರಮಾಣದಲ್ಲಿ ಮುಂದಿನ ಎರಡು ಮೂರು ವರ್ಷ ವಿನಿಯೋಗಕ್ಕೆ ಡಿಸಿಎಂ ಸೂಚಿಸಿದ್ದರು. ಅದರಂತೆ ಪೂರ್ಣ ಪ್ರಮಾಣದಲ್ಲಿ ನಿಧಿ ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಈಗಾಗಲೇ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ವಿಶೇಷ ತರಗತಿ ಸಂಜೆ ವೇಳೆ ನಡೆಸಲಾಗುತ್ತಿದೆ. ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಉಚಿತವಾಗಿ ನೀಡಲಾಗುತ್ತಿದೆ. ಈಗ ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಂಒಯು ಸಹಿ ಮಾಡಿದೆ. 1,500 ಕೋಟಿ ಮೊತ್ತದಲ್ಲಿ ಮುಂದಿನ ಮೂರು ವರ್ಷ ಮೊಟ್ಟೆ ಕೊಡಲು ಒಡಂಬಡಿಕೆ ಮಾಡಲಾಗಿದೆ" ಎಂದು ತಿಳಿಸಿದರು.
"ಕಲ್ಯಾಣ ಕರ್ನಾಟಕದಲ್ಲಿ 1,000 ಎಲ್ಕೆಜಿ, ಯುಕೆಜಿ ತೆರೆದಿದ್ದೇವೆ. 38 ಸಾವಿರ ಮಕ್ಕಳು ದಾಖಲಾಗಿದ್ದಾರೆ. ಮುಂದೆ ರಾಜ್ಯದ ಎಲ್ಲಾ ಕಡೆ ಎಲ್ಕೆಜಿ ಯುಕೆಜಿ ತೆರೆಯಲಿದ್ದೇವೆ. ಎಲ್ಕೆಜಿ ಯುಕೆಜಿಯಿಂದ 12ನೇ ತರಗತಿವರೆಗೆ ಒಂದೇ ಆವರಣದಲ್ಲಿ ಮಕ್ಕಳು ವ್ಯಾಸಂಗ ಮಾಡುವ ವ್ಯವಸ್ಥೆ ಬರಬೇಕು ಎನ್ನುವ ಕನಸು ನಮ್ಮದು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಪಡಿಸಲಿದ್ದೇವೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳು ಸೌಕರ್ಯ ಹೊಂದಬೇಕು ಎನ್ನುವ ಆಶಯದಲ್ಲಿ ಕೆಲಸ ಮಾಡಲಿದ್ದೇವೆ" ಎಂದರು.
ರಾಜ್ಯದಲ್ಲಿ 2000 ಶಾಲೆಗಳ ಗುರುತು:-ಡಿಸಿಎಂ:"ಸಿಎಸ್ಆರ್ ನಿಧಿಯಡಿ ಅಭಿವೃದ್ಧಿ ಪಡಿಸಲು ರಾಜ್ಯದಲ್ಲಿ 2000 ಶಾಲೆಗಳನ್ನು ಗುರುತಿಸಿದ್ದು ಉದ್ಯಮಿಗಳು ಇವುಗಳಲ್ಲಿ ಯಾವುದೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು. ಸರ್ಕಾರಿ ಶಾಲೆಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ, ನಿಮಗೆ ಬೇಕಾದ ರೀತಿ ಬ್ರ್ಯಾಂಡಿಂಗ್ ಮಾಡಿಕೊಳ್ಳಿ ಎಂದು" ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಸಿಎಸ್ಆರ್ ಎಜು ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜಗತ್ತಿನ ಯಾವುದೇ ಅಂತಾರಾಷ್ಟ್ರೀಯ ಕಂಪನಿಗಳ ಎರಡನೇ ಹುದ್ದೆ ಭಾರತೀಯರದ್ದೇ ಆಗಿರಲಿದೆ. ಅಷ್ಟು ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗಲಿದೆ. ನಮ್ಮಲ್ಲಿಯೂ ಅಷ್ಟೇ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ನಮ್ಮ ಮಕ್ಕಳು ಜಗತ್ತಿನ ಮಾರುಕಟ್ಟೆಯ ಸ್ಪರ್ಧೆ ಎದುರಿಸಬೇಕು. ಭಾರತೀಯ ಮಾರುಕಟ್ಟೆಯನ್ನಲ್ಲ, ಹಾಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯ ಅದಕ್ಕಾಗಿಯೇ ನಾವು ಸಿಎಸ್ಆರ್ ನಿಧಿಯನ್ನು ಮೂರ್ನಾಲ್ಕು ವರ್ಷ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಸೂಚಿಸಿದ್ದೇವೆ" ಎಂದರು.