ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ: ಮಧು ಬಂಗಾರಪ್ಪ ದಾವಣಗೆರೆ:"ತಮ್ಮ ಕಷ್ಟಗಳನ್ನು ನೀಗಿಸುತ್ತಾರೆ ಎಂದು ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ" ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನ್ಯಾಮತಿಯ ಸೂರಗೊಂಡನಕೊಪ್ಪದಲ್ಲಿಂದು ಮಾತನಾಡಿದ ಅವರು, "ವಿರೋಧ ಪಕ್ಷಗಳು ಟೀಕೆ-ಟಿಪ್ಪಣಿ ಮಾಡುತ್ತಾರೆ. ಅದಕ್ಕೆ ಉತ್ತರ ನಾನು ಕೊಡಲ್ಲ, ಜನರೇ ಕೊಡುತ್ತಾರೆ" ಎಂದರು.
"3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲು ಯೋಜಿಸಲಾಗಿದೆ. ಈಗಾಗಲೇ 12 ಸಾವಿರ ಶಿಕ್ಷಕರನ್ನು ಭರ್ತಿ ಮಾಡಿಕೊಂಡಿದ್ದು, ಮತ್ತೆ 10 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಲು ಅನುದಾನ ಕೇಳಿದ್ದೇವೆ. 2015ರ ನಂತರ ಅನುದಾನಿತ ಶಾಲೆಗಳಲ್ಲಿನ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹುದ್ದೆ ಭರ್ತಿಗೆ ಅನುಮತಿ ಕೇಳಿದ್ದೇನೆ. ರಾಜ್ಯದಲ್ಲಿ ಈ ಹಿಂದಿದ್ದ ಹಳೆ ಶಿಕ್ಷಣ ನೀತಿಗಿಂತಲೂ ಉತ್ತಮ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆ" ಎಂದು ಹೇಳಿದರು.
"ಶಿವಮೊಗ್ಗದ ಲೋಕಸಭಾ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದ್ದು, ಅಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳತ್ತಾರೆ. ಎಲ್ಲಾ ಮುಖಂಡರನ್ನು ವಿಶ್ವಾಸ ತೆಗೆದುಕೊಂಡು ಪಕ್ಷ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ. ಪಕ್ಷ ಘೋಷಿಸಿದ ಅಭ್ಯರ್ಥಿಯನ್ನು ನೂರಕ್ಕೆ ನೂರು ಗೆಲ್ಲಿಸುತ್ತೆವೆ" ಎಂದರು.
ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ: ಮಧು ಬಂಗಾರಪ್ಪ ಸಂತ ಸೇವಾಲಾಲ್ 285ನೇ ಜಯಂತಿ ಆಚರಣೆ: ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ರ 285ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಜಯಂತಿ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಶಾಂತನಗೌಡ ನಗರಿ ಬಾರಿಸಿ ಉದ್ಘಾಟಿಸಿದರು.
ಈ ಜಯಂತಿಯನ್ನು ಬಂಜಾರ ಸಮುದಾಯ ಜಾತ್ರೆ ರೂಪಾದಲ್ಲಿ ಆಚರಿಸುತ್ತಾ ಬಂದಿದೆ. ಭಾಯಾಗಢ್‌ನಲ್ಲಿ ನಡೆದ ಜಾತ್ರೆಗೆ ಸಾವಿರಾರು ಜನ ಆಗಮಿಸಿ ಸಂತ ಸೇವಾಲಾಲ್ ರವರ ಗದ್ದುಗೆಯ ದರ್ಶನ ಪಡೆದುಕೊಂಡರು. ಜಾತ್ರೆಗೆ ಬಂಜಾರ ಸಮುದಾಯದ ಮಹಿಳೆಯರು ಸಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದರು. ಭಕ್ತರು 300ಕ್ಕೂ ಹೆಚ್ಚು ತಾಂಡಗಳಿಂದ ಸೂರಗೊಂಡನಕೊಪ್ಪಕ್ಕೆ ಆಗಮಿಸಿದ್ದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂತ ಸೇವಾಲಾಲ್ ವೇದಿಕೆಯಲ್ಲಿ ಕಲಾವಿದರು ಕಂಸಾಳೆ, ವೀರಗಾಸೆ ಕುಣಿತ ಪ್ರದರ್ಶಿಸಿ, ಜನಪದ ಹಾಡುಗಳನ್ನು ಹಾಡಿದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಶಾಂತನಗೌಡ ಮತ್ತು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿ, "ಬಂಜಾರ ಸಮುದಾಯಕ್ಕೆ ಸಂತ ಸೇವಾಲಾಲ್ ಕೊಡುಗೆ ಅಪಾರ. ಸೇವಾಲಾಲ್ ಜನ್ಮಸ್ಥಳ ಕರ್ನಾಟಕದಲ್ಲಿ ಇರುವುದು ನಮಗೆ ಹೆಮ್ಮೆ. ಬಂಜಾರ ಸಮುದಾಯಕ್ಕೆ ಸರ್ಕಾರದಿಂದ ಹೆಚ್ಚು ಒತ್ತು ನೀಡುತ್ತೇವೆ. ನಿಮ್ಮ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿರುತ್ತದೆ. ಮೆಡಿಕಲ್ ಕಾಲೇಜ್ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಬದ್ಧ" ಎಂದು ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ಸಂತ ಸೇವಾಲಾಲ್ ಜಯಂತಿ ವೇಳೆಗೆ ನಿಮ್ಮ ಭಾಯಾಗಡ್ನಲ್ಲಿ ರೈಲ್ವೆ ನಿಲ್ದಾಣ ಆಗುತ್ತೆ. ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಣೆಬೆನ್ನೂರು ಟು ಶಿವಮೊಗ್ಗ ರೈಲ್ವೆ ನಿಲ್ದಾಣ ಆಗುತ್ತಿದೆ. ಇದೆ ಸೇವಾಲಾಲ್ ಜನ್ಮ ಸ್ಥಳದ ಮೂಲಕ ರೈಲ್ವೆ ಹಳಿ ಹೋಗಲು ನಾನು ಕೇಳಿಕೊಂಡಿದ್ದೆ. ಭಾಯಾಗಡ್ ರೈಲು ನಿಲ್ದಾಣ ಆಗಿ ಅದನ್ನ ಮುಂದಿನ ಜಾತ್ರೆ ವೇಳೆ ಉದ್ಘಾಟನೆ ಮಾಡುತ್ತೇವೆ. ನಾನು ಕೇವಲ ಮೈಕ್ನಲ್ಲಿ ರೈಲು ಬಿಡಲ್ಲ" ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಬಸವರಾಜ್ ಬೊಮ್ಮಾಯಿ