ಬೆಂಗಳೂರು: ನಾನು ವಿಜಯಪುರ ಜಿಲ್ಲೆಯವ, ನನಗೂ ಭಾಷೆ ಗೊತ್ತಿದೆ. ಬಾಗಲಕೋಟೆಗೇ ಬಂದು ನಿನಗೆ ನಿನ್ನ ಭಾಷೆಯಲ್ಲೇ ಉತ್ತರ ನೀಡುವೆ' ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಾಜಿ ಸಚಿವ ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದ್ದಾರೆ.
ನಿರಾಣಿ ಅವರು ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಂ. ಬಿ. ಪಾಟೀಲ್, ಮಿಸ್ಟರ್ ಮುರುಗೇಶ್ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿ.ಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿ ಅವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವುದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮಿ. ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿಯನ್ನು ನೀಡಿದ್ದೇನೆ ಎಂದಿದ್ದಾರೆ.